ಭೋಪಾಲ್ (ಮಧ್ಯಪ್ರದೇಶ): ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮಧ್ಯಪ್ರದೇಶದ ಆರೋಗ್ಯ ಇಲಾಖೆಯ ನಿವೃತ್ತ ಸ್ಟೋರ್‌ಕೀಪರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದರು. ರಾಜ್‌ಗಢದ ಜಿಲ್ಲಾ ಆಸ್ಪತ್ರೆಯ ಸ್ಟೋರ್ ಕೀಪರ್ ಆಗಿ ನಿವೃತ್ತಗೊಂಡಿರುವ ಲಾಟೇರಿ ನಿವಾಸಿ ಅಶ್ಫಾಕ್ ಅಲಿ, ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಭ್ರಷ್ಟಾಚಾರ ಕಾಯ್ದೆಯಡಿ ಪೊಲೀಸರು ದೂರಿಗೆ ದೂರು ಬಂದಿದ್ದು, ತನಿಖೆ ಕೈಗೊಂಡಿದ್ದಾರೆ. ಈ ವೇಳೆ, ಭಾರಿ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯದ 10 ಕೋಟಿ ರೂ. ಇರಬಹುದು ಎಂದು ಲೋಕಾಯುಕ್ತ ಅಧಿಕಾರಿಗಳು ಅಂದಾಜಿಸಿದ್ದಾರೆ.
ಅಶ್ಫಾಕ್ ಅಲಿ ಕುಟುಂಬದ ಸದಸ್ಯರ ಹೆಸರಿನಲ್ಲಿ 16ಕ್ಕೂ ಹೆಚ್ಚು ಸ್ಥಿರಾಸ್ತಿಗಳು ಪತ್ತೆಯಾಗಿವೆ. ಭೋಪಾಲ್ ವಿದಿಶಾ ಮತ್ತು ಮೂಲ ಸ್ಥಳವಾದ ಲಾಟೇರಿಯಲ್ಲಿ 50ಕ್ಕೂ ಹೆಚ್ಚು ಸ್ಥಿರಾಸ್ತಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿಯ ಪುತ್ರಿ ಹೀನಾ ಕೌಸರ್ ಮತ್ತು ಪತ್ನಿ ರಶೀದಾ ಬೀ ಹೆಸರಿನಲ್ಲಿ ಅಪಾರ ಆಸ್ತಿಗಳು ಖರೀದಿ ಮಾಡಲಾಗಿದೆ. ಇವರುಗಳ ಹೆಸರಿನಲ್ಲೇ ಕೋಟಂತರ ಮೌಲ್ಯದ 16 ಸ್ಥಿರಾಸ್ತಿಗಳಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
50ಕ್ಕೂ ಹೆಚ್ಚು ಸ್ಥಿರಾಸ್ತಿ ಖರೀದಿಗೆ ಸಂಬಂಧಿಸಿದಂತೆ ಲಾಟೇರಿ ಹಾಗೂ ವಿದಿಶಾದಲ್ಲಿ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಇದರ ನಡುವೆ ಭೋಪಾಲ್‌ನ ಗ್ರೀನ್ ವ್ಯಾಲಿ ಕಾಲೋನಿಯಲ್ಲಿರುವ ಅಶ್ಫಾಕ್ ಅಲಿ ಮನೆ ಮತ್ತು ಲಾಟೇರಿಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತದ ಎರಡು ತಂಡಗಳು ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿವೆ.
ಈ ಸಂದರ್ಭದಲ್ಲಿ ಸುಮಾರು 25,000 ಚದರ ಅಡಿ ವಿಸ್ತಾರವಾದ ಐಷಾರಾಮಿ ಮನೆ ನಿರ್ಮಿಸಿರುವುದು ಪತ್ತೆಯಾಗಿದೆ. ಮುಸ್ತಾಕ್ ಮಂಜಿಲ್ ಎಂಬ ಮೂರು ಅಂತಸ್ತಿನ ಕಟ್ಟಡವನ್ನು ಹೊಂದಿದ್ದು, ಇದನ್ನು ಖಾಸಗಿ ಶಾಲೆಗೆ ಬಾಡಿಗೆ ನೀಡಲಾಗಿದೆ. 14,000 ಚದರಡಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಸಹ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಭೋಪಾಲ್‌ನಲ್ಲಿರುವ ಮನೆಯೊಂದರಲ್ಲಿ ಶೋಧ ನಡೆಸಿದಾಗ ಅಪಾರ ಪ್ರಮಾಣದ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳು, ಬೆಲೆಬಾಳುವ ಕೈಗಡಿಯಾರಗಳು ಮತ್ತು ಗೃಹಬಳಕೆಯ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ನಿವಾಸಗಳ ಮೇಲೆ ನಮ್ಮ ತಂಡಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಇನ್ನೂ ಶೋಧ ಕಾರ್ಯ ಹಾಗೂ ತನಿಖೆ ಮುಂದುವರೆದಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಸಂಪೂರ್ಣ ಲಭ್ಯವಾಗಲಿದೆ ಎಂದು ಲೋಕಾಯುಕ್ತ ಡಿಎಸ್‌ಪಿ ವೀರೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: Hoax call: ಸಚಿವಾಲಯ ಕಚೇರಿಯಲ್ಲಿ ಬಾಂಬ್ ಇಟ್ಟಿದ್ದಾಗಿ ಬೆದರಿಕೆ; ಆತಂಕ ಸೃಷ್ಟಿಸಿದ ಹುಸಿ ಕರೆ, ಆರೋಪಿ ಬಂಧನ