ಢಾಕಾ(ಬಾಂಗ್ಲಾದೇಶ): ದೇಶದ್ರೋಹ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಹಿಂದೂ ಸನ್ಯಾಸಿ ಹಾಗೂ ಬಾಂಗ್ಲಾದೇಶ ಸಮ್ಮಿಲಿತ್ ಸನಾತನ ಜಾಗರಣ ಜೋಟೆಯ ವಕ್ತಾರ ಚಿನ್ಮಯ್ ಕೃಷ್ಣ ದಾಸ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು (ಗುರುವಾರ) ಚಿತ್ತಗಾಂಗ್ ನ್ಯಾಯಾಲಯದಲ್ಲಿ ನಡೆಯಲಿದೆ. ನವೆಂಬರ್ 25ರಂದು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಸ್ ಅವರನ್ನು ಬಂಧಿಸಲಾಗಿತ್ತು.
ಢಾಕಾ ಮತ್ತು ಚಿತ್ತಗಾಂಗ್ನ 20 ವಕೀಲರು ಬೆಂಬಲಿಸಿದ ಜಾಮೀನು ಅರ್ಜಿಯಲ್ಲಿ ಚಿನ್ಮಯ್ ಕೃಷ್ಣ ದಾಸ್ ಅವರ ವಿರುದ್ಧ ಸುಳ್ಳು ಮತ್ತು ಕಪೋಲಕಲ್ಪಿತ ಆರೋಪಗಳನ್ನು ಹೊರಿಸಲಾಗಿದೆ ಎಂದು ಹೇಳಲಾಗಿದೆ. ಮಧುಮೇಹ ಮತ್ತು ಉಸಿರಾಟದ ಸಮಸ್ಯೆಗಳಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ದಾಸ್ ಅವರನ್ನು ಬಂಧನದಲ್ಲಿಟ್ಟಿರುವುದು ಕಾನೂನುಬಾಹಿರ ಎಂದು ಅವರ ವಕೀಲರು ವಾದಿಸಿದ್ದಾರೆ. ದಾಸ್ ಅವರ ಪ್ರಾಥಮಿಕ ವಕೀಲ ರವೀಂದ್ರ ಘೋಷ್ ಅವರನ್ನು ಈ ಹಿಂದೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸದಂತೆ ನಿರ್ಬಂಧಿಸಲಾಗಿತ್ತು.
ಚಿತ್ತಗಾಂಗ್ ನ್ಯಾಯಾಲಯದಲ್ಲಿ ಇಂದು ನಿಷ್ಪಕ್ಷಪಾತದಿಂದ ವಿಚಾರಣೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಕೋಲ್ಕತಾದ ಇಸ್ಕಾನ್ ಸಂಸ್ಥೆ ವಕ್ತಾರ ರಾಧಾರಾಮ್ ದಾಸ್, ಚಿನ್ಮಯ್ ಕೃಷ್ಣ ದಾಸ್ ಮತ್ತು ಬಾಂಗ್ಲಾದೇಶದ ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಬೆಂಬಲಿಸುವುದನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದ್ದಾರೆ. ಬಾಂಗ್ಲಾದೇಶದ ಹಿಂದೂಗಳ ಸುರಕ್ಷತೆಗಾಗಿ ಮತ್ತು ಅವರಿಗೆ ನ್ಯಾಯ ಸಿಗಲಿ ಎಂದು ಸಂಸ್ಥೆ ಪ್ರಾರ್ಥನೆಗಳನ್ನು ನಡೆಸುತ್ತಿದೆ.
ಡಿಸೆಂಬರ್ 11ರಂದು ಬಾಂಗ್ಲಾದೇಶದ ನ್ಯಾಯಾಲಯವು ತಾಂತ್ರಿಕ ಲೋಪಗಳನ್ನು ಉಲ್ಲೇಖಿಸಿ ದಾಸ್ ಅವರ ಆರಂಭಿಕ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಕಾನೂನಾತ್ಮಕ ಪವರ್ ಆಫ್ ಅಟಾರ್ನಿ ಮತ್ತು ವಕೀಲರ ಪ್ರಾತಿನಿಧ್ಯದ ಅನುಪಸ್ಥಿತಿಯ ಕಾರಣದಿಂದ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು ಎಂದು ವರದಿಗಳು ಹೇಳಿವೆ.
ದಾಸ್ ಅವರ ವಕೀಲರಲ್ಲಿ ಒಬ್ಬರಾದ ಸುಭಾಷ್ ಶರ್ಮಾ ಅವರು ಭದ್ರತಾ ಕಾರಣಗಳಿಂದಾಗಿ ಡಿಸೆಂಬರ್ 3ರಂದು ನಡೆದ ವಿಚಾರಣೆಗೆ ಗೈರು ಹಾಜರಾಗಿದ್ದರು.
ಸರಿಯಾದ ದಾಖಲೆಗಳು ಮತ್ತು ಕಾನೂನು ಪ್ರಾತಿನಿಧ್ಯದ ಅನುಪಸ್ಥಿತಿಯಿಂದ ಕಾನೂನಾತ್ಮಕ ಪ್ರಕ್ರಿಯೆಗಳಿಗೆ ಅಡ್ಡಿಯಾಗಿದೆ ಎಂದು ಪ್ರಾಸಿಕ್ಯೂಟರ್ ಮೊಫಿಜುಲ್ ಹಕ್ ಭುಯಿಯಾನ್ ಹೇಳಿದ್ದಾರೆ. ಏತನ್ಮಧ್ಯೆ, ಭಾರತವು ನ್ಯಾಯಯುತ ಮತ್ತು ಪಾರದರ್ಶಕ ವಿಚಾರಣೆಗೆ ಕರೆ ನೀಡಿದ್ದು, ಪ್ರಕರಣದಲ್ಲಿ ಹೆಸರಿಸಲಾದ ಎಲ್ಲರ ಕಾನೂನು ಹಕ್ಕುಗಳನ್ನು ಗೌರವಿಸುವ ಅಗತ್ಯವನ್ನು ಒತ್ತಿಹೇಳಿದೆ. ದಾಸ್ ಅವರ ಕ್ಷೀಣಿಸುತ್ತಿರುವ ಆರೋಗ್ಯ ಮತ್ತು ಇಲ್ಲಿಯವರೆಗೆ ಪ್ರಕರಣದಲ್ಲಿ ಕಂಡು ಬಂದಿರುವ ಕಾರ್ಯವಿಧಾನದ ಅಕ್ರಮಗಳನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಬಹುದು ಎಂದು ವಕೀಲರು ಮತ್ತು ಬೆಂಬಲಿಗರು ಭರವಸೆ ವ್ಯಕ್ತಪಡಿಸಿದ್ದಾರೆ.