ರಿಯಾಸಿ (ಜಮ್ಮು ಕಾಶ್ಮೀರ ) : ಜಿಲ್ಲೆಯ ಮಕ್ಕಿಧರ್ ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಮಹೋರ್ ತಂಡ, ಉಗ್ರರು ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಯುದ್ಧ ಸಾಮಗ್ರಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಮಕ್ಕಿಧರ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೇನೆ ಮತ್ತು ಮಹೋರ್ ತಂಡ, ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳ ಸಂಗ್ರಹವನ್ನು ಪತ್ತೆ ಹಚ್ಚಿದೆ.
ಡಿಡಿಸಿ ಚುನಾವಣೆಯ ಬಳಿಕ ರಿಯಾಸಿ ಜಿಲ್ಲೆಯಲ್ಲಿ ಉಗ್ರರ ಉಪಟಳ ಕಡಿಮೆಯಾಗಿತ್ತು ಮತ್ತು ಜನರು ನೆಮ್ಮದಿಯಿಂದ ಇದ್ದರು. ದುಷ್ಕೃತ್ಯಗಳ ಮೂಲಕ ಶಾಂತಿ ಕದಡಲು ಮತ್ತು ಅಭಿವೃದ್ದಿಗೆ ಅಡ್ಡಿಪಡಿಸಲು ಉಗ್ರರು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಡಿಡಿಸಿ ಚುನಾವಣೆ ವೇಳೆ ರಿಯಾಸಿ ಜಿಲ್ಲೆಯಲ್ಲಿ ಶೇ 80 ರಷ್ಟು ದಾಖಲೆಯ ಮತದಾನವಾಗಿದೆ.
ಚುನಾವಣೆಯ ಬಳಿಕ ನೆಲೆಸಿರುವ ಶಾಂತಿ ಸುವ್ಯವಸ್ಥೆಯನ್ನು ಕೆಡಿಸಲು ಸಂಚು ರೂಪಿಸಿ ಉಗ್ರರು ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದರು, ಆದರೆ, ಉಗ್ರರ ಸಂಚನ್ನು ಸೇನೆ ವಿಫಲಗೊಳಿಸಿದೆ ಎಂದು ತಿಳಿದು ಬಂದಿದೆ. ಕಾರ್ಯಾಚರಣೆ ವೇಳೆ, ಎಕೆ 47 ರೈಫಲ್- 1, ಎಸ್ಎಲ್ ರೈಫಲ್- 1, 303 ಬೋಲ್ಟ್ ರೈಫಲ್ -1, ಚೈನೀಸ್ ಪಿಸ್ತೂಲ್ -2, ಪಿಸ್ತೂಲ್ ಮದ್ದುಗುಂಡು ರೇಡಿಯೊ ಸೆಟ್ ಮೆಜೆಂಟಿನಾ -2, ಎಕೆ 47 ಎಂಎನ್ ಬಾಕ್ಸ್ ಸೀಲ್- 1, ಯುಬಿಜಿಎಲ್ ಗ್ರೆನೇಡ್ -4 ಅನ್ನು ಸೇನೆ ವಶಪಡಿಸಿಕೊಂಡಿದೆ.