ಧರ್ಮಶಾಲಾ (ಹಿಮಾಚಲಪ್ರದೇಶ) : ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಜನ್ಮದಿನದಂದು ಚಂದ್ರನ ಮೇಲೆ ಒಂದು ಎಕರೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಜೂನ್ 23ರಂದು ಜನ್ಮದಿನ ಆಚರಣೆ ಮಾಡಲಾಗಿದ್ದು, ಕಂಗ್ರಾ ಜಿಲ್ಲೆಯ ಶಹಪುರ್ ನಿವಾಸಿ ಹರೀಶ್ ಮಹಾಜನ್ ಎಂಬುವರು ತಮ್ಮ ಪತ್ನಿ ಪೂಜಾ ಎಂಬುವರಿಗಾಗಿ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿ ಚಂದ್ರನ ಮೇಲೆ ಒಂದು ಎಕರೆ ಭೂಮಿಯನ್ನು ಖರೀದಿಸಿದ್ದಾರೆ.
ಹರೀಶ್ ಮಹಾಜನ್ ಕಳೆದ ವರ್ಷ ಚಂದ್ರನ ಮೇಲೆ ಭೂಮಿ ಖರೀದಿಸಲು ಯೋಜಿಸಿದ್ದರು. ಅದರಂತೆ ನ್ಯೂಯಾರ್ಕ್ನ ಇಂಟರ್ನ್ಯಾಷನಲ್ ಲೂನಾರ್ ಲ್ಯಾಂಡ್ಸ್ ಸೊಸೈಟಿಗೆ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದ ಪ್ರಕ್ರಿಯೆ ಮತ್ತು ಕಾಯುವಿಕೆಯ ನಂತರ ಜಮೀನು ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಕಳುಹಿಸಿದ್ದಾರೆ.
ಇದು ಪ್ರೀತಿಯ ವಿಷಯವಾಗಿದೆ, ಹಣದ ವಿಷಯವಲ್ಲ ಎಂದು ಹರೀಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಪರಿಣಾಮ ಅವರು ಪಾವತಿಸಿದ ಮೊತ್ತವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಪತ್ನಿ ಪೂಜಾ ಸಂತಸ ಹಂಚಿಕೊಂಡಿದ್ದು, ಅಂತಹ ಉಡುಗೊರೆಯನ್ನು ನಾನು ಎಂದಿಗೂ ಊಹಿಸಿರಲಿಲ್ಲ ಎಂದಿದ್ದಾರೆ.
ವರದಿಯ ಪ್ರಕಾರ, ಚಂದ್ರನ ಮೇಲೆ ಭೂಮಿ ಖರೀದಿಸಿದ ಹಿಮಾಚಲದ ಎರಡನೇ ವ್ಯಕ್ತಿ ಹರೀಶ್ ಮಹಾಜನ್ ಆಗಿದ್ದಾರೆ. ಈ ಹಿಂದೆ ಉನಾ ಜಿಲ್ಲೆಯ ಉದ್ಯಮಿಯೊಬ್ಬರು ತಮ್ಮ ಮಗನಿಗೆ ಚಂದ್ರನ ಮೇಲೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡಿದ್ದರು.
ಇದನ್ನೂ ಓದಿ: ಪ್ರಬಲ ಭೂಕಂಪನದಿಂದ ಬರಡಾದ ಆಫ್ಘಾನ್ : ಪರಿಹಾರ ಸಾಮಗ್ರಿ ಕಳುಹಿಸಿದ ಭಾರತ