ಧರ್ಮಪುರಿ(ತಮಿಳುನಾಡು): ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ತಮ್ಮ ಎರಡು ಮಕ್ಕಳೊಂದಿಗೆ ಅರೂರು ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದರು. ಇವರನ್ನು ಸಾರ್ವಜನಿಕರ ನೆರವಿನಿಂದ ಪೊಲೀಸ್ ಇಲಾಖೆ ರಕ್ಷಿಸಿದೆ. ಆರೂರು ಸಮೀಪದ ಕೀರಪಟ್ಟಿ ಗ್ರಾಮದ ಇಂದಿರಾ ನಗರದ ಪ್ರಶಾಂತ್ ಎಂಬುವವರ ಪತ್ನಿ ಗೀತಾ. ಈ ದಂಪತಿಗೆ ಮೊದಲು ಗಂಡು ಮಗು ಜನಿಸಿದೆ. ಬಳಿಕ ಪತಿ ಪ್ರಶಾಂತ್ ಹಾಗೂ ಆತನ ಪೋಷಕರು ಗೀತಾಳಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರಂತೆ. ಗೀತಾ ಅವರು ಸುಮಾರು 2 ವರ್ಷಗಳ ಹಿಂದೆ ಈ ಬಗ್ಗೆ ಆರೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಳಿಕ ಪೊಲೀಸರು ಗೀತಾ ಮತ್ತು ಶಿಶುವನ್ನು ಆಕೆಯ ತಾಯಿಯ ಮನೆಗೆ ಕಳುಹಿಸಿದ್ದರು. ಕೆಲವು ತಿಂಗಳ ನಂತರ ಪ್ರಶಾಂತ್ ಪತ್ನಿ ಗೀತಾಳನ್ನು ಮನೆಗೆ ಕರೆದುಕೊಂಡು ಹೋಗಿದ್ದನಂತೆ. ಕಳೆದ 20 ದಿನಗಳ ಹಿಂದೆ ಗೀತಾ 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಬಳಿಕ ಪ್ರಶಾಂತ್ನ ಪೋಷಕರು "ವರದಕ್ಷಿಣೆ ಕೊಟ್ಟರೆ ಮಾತ್ರ ಗಂಡನೊಂದಿಗೆ ಬಾಳಬಹುದು" ಎಂದು ಹೇಳಿ ಮನೆಯಿಂದ ಹೊರ ಹಾಕಿದ್ದಾರೆ.
ಈ ಹಿನ್ನೆಲೆ ಗೀತಾ ಮತ್ತೊಮ್ಮೆ ಆರೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಕ್ರಮ ಕೈಗೊಳ್ಳದ ಕಾರಣ ಗೀತಾ ತನ್ನ ಇಬ್ಬರು ಮಕ್ಕಳೊಂದಿಗೆ ಅರೂರ್ ಬಸ್ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದರು. ಇದನ್ನು ಕಂಡ ಸಾರ್ವಜನಿಕರು ಆಹಾರವನ್ನು ನೀಡಿ ಮಾನವೀಯತೆ ಮೆರೆದಿದ್ದರು.
ಪ್ರಕರಣದಲ್ಲಿ ಸತ್ಯಾಂಶವಿದ್ದರೆ ಕಠಿಣ ಕ್ರಮ: ಈ ವಿಷಯ ಅರೂರು ಉಪ ಪೊಲೀಸ್ ವರಿಷ್ಠಾಧಿಕಾರಿ ಗಣೇಶ್ ಅವರ ಗಮನಕ್ಕೆ ಬಂದಿದೆ. ಅವರ ಆದೇಶದ ಮೇರೆಗೆ ಮೂರು ದಿನಗಳಿಂದ ಬಸ್ ನಿಲ್ದಾಣದಲ್ಲಿ ಮಕ್ಕಳೊಂದಿಗೆ ನರಳಾಡುತ್ತಿದ್ದ ಗೀತಾಳನ್ನು ಮಹಿಳಾ ಪೊಲೀಸರು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಆರೂರು ಠಾಣೆಯ ಪೊಲೀಸರು ಪ್ರತಿಕ್ರಿಯಿಸಿದ್ದು, ಗೀತಾ ಅವರ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ಪ್ರಕರಣದಲ್ಲಿ ಸತ್ಯಾಂಶವಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ: ಗರ್ಭಿಣಿ ಅನುಮಾನಾಸ್ಪದ ಸಾವು
ಮಾರಣಾಂತಿಕ ಹಲ್ಲೆ: ವರದಕ್ಷಿಣೆ ಕಿರುಕುಳ ಪ್ರಕರಣಗಳು ಎಲ್ಲೆಡೆಯಿಂದಲೂ ವರದಿಯಾಗುತ್ತಲೇ ಇರುತ್ತವೆ. ಇದು ತಮಿಳುನಾಡು ಮಹಿಳೆಯ ಕಥೆ ಆದರೆ. ಹೆಂಡತಿಯ ತವರು ಮನೆಯವರ ಮೇಲೆ ಅಳಿಯ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹೊಸಕೋಟೆ ತಾಲೂಕಿನಲ್ಲಿ ಇತ್ತೀಚೆಗೆ ವರದಿಯಾಗಿತ್ತು. ಈ ಘಟನೆ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹೊಸಕೋಟೆ ಪೊಲೀಸರು ಮಾವನ ಮೇಲೆ ಹಲ್ಲೆ ಮಾಡಿದ ಅಳಿಯ ಮೋಹನ್ ಹಾಗೂ ಕುಟುಂಬದ ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಇದನ್ನೂ ಓದಿ: ಪತ್ನಿಗೆ ವರದಕ್ಷಿಣೆ ಕಿರುಕುಳ: ಜಗಳ ಬಿಡಿಸಲು ಬಂದ ಮಾವನಿಗೆ ಇರಿದು, ಬಾವನ ಕಾಲು ಮುರಿದ ಅಳಿಯ!