ಮುಂಬೈ: ಎರಡು ವರ್ಷದ ಮಗುವನ್ನ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಮಹಿಳೆಯೋರ್ವಳು, ತದನಂತರ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿದೆ.
ಇಲ್ಲಿನ ಗಜಾನನ್ ನಗರದಲ್ಲಿ ಈ ಘಟನೆ ನಡೆದಿದೆ. ಎರಡು ವರ್ಷದ ಹೆಣ್ಣು ಮಗಳು ಹಾಗೂ ತಾಯಿ ರೂಪಾಲಿ ಸಾವನ್ನಪ್ಪಿರುವ ದುರ್ದೈವಿಗಳು. ರೂಪಾಲಿ ಅತ್ತೆ ಹೊರಗಡೆ ಕಟ್ಟಿಗೆ ತೆಗೆದುಕೊಂಡು ಬರಲು ಹೋಗಿದ್ದಾಗ ಮಗಳನ್ನ ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಇದೇ ವೇಳೆ ಹೊರಗಡೆ ಆಟವಾಡುತ್ತಿದ್ದ ದೊಡ್ಡ ಮಗಳು ಮನೆಗೆ ಬಂದಿದ್ದಾಳೆ. ತಕ್ಷಣವೇ ತನ್ನ ತಾಯಿಯನ್ನ ತಬ್ಬಿಕೊಳ್ಳುವ ಪ್ರಯತ್ನ ನಡೆಸಿದ್ದು, ಆಕೆಯನ್ನ ಬೇರೆ ಕಡೆ ತಳ್ಳಿ ಸೀಮೆಎಣ್ಣೆ ಸುರಿದುಕೊಂಡು ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹೊರಗಡೆಯಿಂದ ಅತ್ತೆ ಮನೆಗೆ ಬಂದಾಗ ಘಟನೆ ಗೊತ್ತಾಗಿದ್ದು, ತಕ್ಷಣವೇ ನೆರೆಹೊರೆಯವರನ್ನ ಕೂಗಿ ಕರೆದಿದ್ದಾರೆ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಯಾವ ವಿಷಯಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.