ರಾಂಚಿ( ಜಾರ್ಖಂಡ್): ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಮಧ್ಯೆ ವೈಮನಸ್ಸು ಉಂಟಾಗಿ ಗಂಡನ ಮರ್ಮಾಂಗವನ್ನೇ ಹೆಂಡತಿ ಕತ್ತರಿಸಿರುವ ಘಟನೆ ಜಾರ್ಖಂಡ್ನ ರಾಂಚಿಯಲ್ಲಿ ನಡೆದಿದೆ.
ಕಳೆದ ಜನವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ನವಜೋಡಿ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಿತ್ತಂತೆ. 22 ವರ್ಷದ ಕುಮಾರ್ ಮಂಡಲ್ ಮತ್ತು ದೇವಿ ನಡುವೆ ಜಗಳವಾಗಿದ್ದರಿಂದ ಕಳೆದ ವಾರ ಗ್ರಾಮದಲ್ಲಿ ರಾಜಿ ನಡೆಸಿ, ಜೊತೆಯಾಗಿ ಸಂಸಾರ ನಡೆಸುವಂತೆ ಗ್ರಾಮಸ್ಥರು ತಿಳಿಹೇಳಿದ್ದರಂತೆ.
ಈ ವೇಳೆ ಗಂಡನ ಬಳಿ ತಾನು ತವರು ಮನೆಗೆ ಹೋಗುವೆ ಎಂದು ಹೆಂಡತಿ ಕೇಳಿಕೊಂಡಿದ್ದಾಳೆ. ಆದರೆ ಇದಕ್ಕೆ ಗಂಡ ಅನುಮತಿ ನೀಡಲ್ಲ. ಹೀಗಾಗಿ ಕೋಪಗೊಂಡ ಆಕೆ ಬ್ಲೇಡ್ನಿಂದ ಗಂಡನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ ಎನ್ನಲಾಗಿದೆ. ಸಾವು-ಬದುಕಿನ ನಡುವೆ ಹೋರಾಟ ನಡೆಸಿರುವ ಆತನನ್ನು ರಾಂಚಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.