ನವದೆಹಲಿ: ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ದಾಳಿ ನಡೆಸಿದ ಬಳಿಕ ಭಾರತವು ನೈಜ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ನಿಶ್ಚಿತ ನಿಯಮ(ಆರ್ಒಇ )ಗಳನ್ನು ಬದಲಾಯಿಸಿದೆ.
ಹೊಸ ನಿಯಮದ ಪ್ರಕಾರ, ಎಲ್‌ಎಸಿಯಲ್ಲಿ ನಿಯೋಜಿಸಲಾದ ಕಮಾಂಡರ್‌ಗಳು ಉದ್ವಿಗ್ನ ಸಂದರ್ಭಗಳನ್ನು ನಿಭಾಯಿಸಲು ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬಹುದು. ಕಮಾಂಡರ್‌ಗಳು ಇನ್ನು ಮುಂದೆ ಪರಿಸ್ಥಿತಿ ನಿಯಂತ್ರಿಸಲು ಗನ್ ಸೇರಿದಂತೆ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.
ಎಲ್‌ಎಸಿಯನ್ನು ಉಲ್ಲಂಘಿಸುವ ಯಾವುದೇ ಪ್ರಯತ್ನಕ್ಕೆ ಭಾರತ ತಕ್ಕ ಪ್ರತಿಕ್ರಿಯೆ ನೀಡುತ್ತದೆ. ನಮ್ಮ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದವರಿಗೆ ನಮ್ಮ ಧೈರ್ಯಶಾಲಿ ಮಣ್ಣಿನ ಪುತ್ರರು ಸೂಕ್ತವಾದ ಪಾಠವನ್ನು ಕಲಿಸುತ್ತಾರೆ ಎಂದು ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈ ಬೆನ್ನಲ್ಲೇ ಎಲ್ಎಸಿಯ ನಿಶ್ಚಿತ ನಿಯಮ (ಆರ್ಒಇ ) ಬದಲಾಯಿಸಲಾಗಿದೆ.
ಜೂನ್ 15 ರಂದು ರಾತ್ರಿ ಇಂಡೋ -ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು ಮತ್ತು 10 ಸೈನಿಕರನ್ನು ಚೀನಾ ಬಂಧಿಸಿತ್ತು. ಆ ಬಳಿಕ ಘರ್ಷಣೆಯ ಸಂದರ್ಭ ಸೈನಿಕರು ಯಾಕೆ ಗನ್ ಬಳಸಲಿಲ್ಲ. ನಿರಾಯುಧರಾಗಿ ಯಾಕೆ ಹೋದರು ಎಂದು ಅನೇಕರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್.ಜೈ ಶಂಕರ್ ಭಾರತೀಯ ಯೋಧರು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು. ಆದರೆ, ಗುಂಡು ಹಾರಿಸಿರಲಿಲ್ಲ. ಗಡಿ ಕರ್ತವ್ಯದಲ್ಲಿರುವ ಎಲ್ಲಾ ಸೈನಿಕರು ಯಾವಾಗಲೂ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ. 1996 ಮತ್ತು 2005 ರ ಒಪ್ಪಂದದ ಪ್ರಕಾರ ಚೀನಾ ಗಡಿಯಲ್ಲಿ ಬಂದೂಕು ಬಳಸುವಂತಿಲ್ಲ. ಹೀಗಾಗಿ ಜೂನ್ 15 ರಂದು ಗಾಲ್ವಾನ್ನಲ್ಲಿ ನಡೆದ ಘರ್ಷಣೆ ವೇಳೆ ಬಂದೂಕು ಪ್ರಯೋಗಿಸಿಲ್ಲ ಎಂದು ತಿಳಿಸಿದ್ದಾರೆ.