ಒಂದೇ ದಿನ ಎರಡು ಚಿರತೆ ಸೆರೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - ಮೈಸೂರು
Published : Feb 13, 2024, 12:44 PM IST
ಮೈಸೂರು: ಒಂದೇ ದಿನ ಎರಡು ಚಿರತೆಗಳು ಸೆರೆಯಾಗಿದ್ದು, ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಾಣಿಗಳು ಅರಣ್ಯ ಇಲಾಖೆ ನಿದ್ದೆಗೆಡಿಸುತ್ತಿವೆ. ತಿ.ನರಸೀಪುರ ತಾಲ್ಲೂಕಿನ ಕುರುಬಾಳಹುಂಡಿ ಗ್ರಾಮದಲ್ಲಿ 4 ವರ್ಷದ ಗಂಡು ಚಿರತೆ ಸೆರೆಯಾದರೆ, ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ 5 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಕಳೆದ ಹಲವು ತಿಂಗಳಿನಿಂದ ಚಿರತೆ ಹಾವಳಿಯಿಂದ ಸಾಕು ಪ್ರಾಣಿಗಳ ಪ್ರಾಣ ಹಾನಿಯಾದರೆ, ಜಮೀನಿಗೆ ಹೋಗಲು ಗ್ರಾಮಸ್ಥರು ಹೆದರುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಚಿರತೆಗಳ ಓಡಾಟ ಗಮನಿಸಿ ಬೋನು ಇರಿಸಲಾಗಿತ್ತು. ಬೋನಿಗೆ ಬಿದ್ದ ಚಿರತೆಗಳು ಸೆರೆಯಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಧಿಕಾರಿಗಳು ಸೆರೆಯಾಗಿರುವ ಚಿರತೆಗಳನ್ನು ನಾಗರಹೊಳೆಗೆ ರವಾನಿಸಿದ್ದಾರೆ.
ಸಿಸಿಟಿವಿಯಲ್ಲಿ ಚಿರತೆ ಪ್ರತ್ಯಕ್ಷ: ಕಳೆದ ವಾರ ಮೈಸೂರಿನ ದೊಡ್ಡ ಕಾನ್ಯಾ ಗ್ರಾಮದಲ್ಲಿ ಹುಲಿಗಳು ಓಡಾಡುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆ ಅವುಗಳ ಚಲನವಲನ ಗಮನಿಸಲು ಅರಣ್ಯ ಇಲಾಖೆ ಸಿಸಿಟಿವಿ ಅಳವಡಿಸಲಾಗಿತ್ತು. ಆದ್ರೆ ಈ ಸಿಸಿಟಿವಿಯಲ್ಲಿ ಹುಲಿಗಳ ಬದಲಾಗಿ ಚಿರತೆ ಓಡಾಟ ಕಂಡುಬಂದಿತ್ತು. ಹೀಗಾಗಿ ಈ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಓದಿ: ತೋಟದಲ್ಲಿ ಕಟ್ಟಿಹಾಕಿದ್ದ ಪಿಟ್ಬುಲ್ ನಾಯಿಯನ್ನು ಕೊಂದು ತಿಂದ ಚಿರತೆ