ಅಂಬಾವಿಲಾಸ ಅರಮನೆಯ ದೀಪಾಲಂಕಾರದಲ್ಲಿ ಪೊಲೀಸ್ ಬ್ಯಾಂಡ್ ನಿನಾದ
Published : Oct 8, 2024, 11:05 PM IST
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ದಿನದಿಂದ ದಿನಕ್ಕೆ ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟುತ್ತಿದ್ದು, ಮಂಗಳವಾರ ರಾತ್ರಿ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಪೊಲೀಸ್ ವಾದ್ಯಗೋಷ್ಠಿ ಜನಮನಸೂರೆಗೊಳಿಸಿತು.
ಒಂದು ಕಡೆ ಅರಮನೆಯ ದೀಪಾಲಂಕಾರದ ಬೆಳಕಿನಲ್ಲಿ ಜಂಬೂಸವಾರಿಯ ಗಜಪಡೆ ತಾಲೀಮು ಮುಗಿಸಿ, ಅರಮನೆಯ ತಮ್ಮ ಬಿಡಾರಕ್ಕೆ ದೀಪದ ಬೆಳಕಿನಲ್ಲೇ ಹೆಜ್ಜೆ ಹಾಕಿದರೆ, ಮತ್ತೊಂದು ಕಡೆ ಅರಮನೆಯ ದೀಪದ ಬೆಳಕಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ಪೊಲೀಸರು ತಮ್ಮ ವಾದ್ಯಗಳನ್ನು ಹಿಡಿದು ಸಂಗೀತ ಸುಧೆ ಹರಿಸಿದರು.
ಶತಮಾನಗಳ ಇತಿಹಾಸವಿರುವ ಮೈಸೂರು ಪೊಲೀಸ್ ಬ್ಯಾಂಡ್ ತಂಡದಲ್ಲಿ 150ಕ್ಕೂ ಹೆಚ್ಚು ಜನರಿದ್ದು, ಪ್ರತಿವರ್ಷ ಅರಮನೆಯ ಮುಂಭಾಗದಲ್ಲಿ, ದಸರಾ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್ ಮೂಲಕ ಸಂಗೀತ ಸುಧೆ ಹರಿಸುತ್ತಾ ಬಂದಿದ್ದಾರೆ. ಅದರಲ್ಲೂ ಇಂದು ವಂದೇ ಮಾತರಂ ಗೀತೆ ಸೇರಿದಂತೆ ಹಲವಾರು ದೇಶಭಕ್ತಿ ಗೀತೆಗಳನ್ನು ನುಡಿಸಿದರು.
ಮತ್ತೊಂದು ಕಡೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪರಮೇಶ್ವರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಚಿವ ಸತೀಶ್ ಜಾರಕಿಹೊಳಿ, ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಸೇರಿದಂತೆ ಹಲವರು ಹಾಜರಿದ್ದರು.
ಇದನ್ನೂ ಓದಿ : ನವರಾತ್ರಿ ಸಡಗರ: ಚಾಮುಂಡಿ ತಾಯಿಯ ದರ್ಶನಕ್ಕೆ ನಾಡಿನೆಲ್ಲೆಡೆಯಿಂದ ಭಕ್ತರ ಆಗಮನ