ಭರತನಾಟ್ಯದ 52 ಮುದ್ರೆ ಪ್ರದರ್ಶಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ 3 ವರ್ಷದ ಮಗು
Published : 4 hours ago
ಕೊಟ್ಟಾಯಂ, ಕೇರಳ: ಭರತನಾಟ್ಯದ ಎಲ್ಲ 52 ಮುದ್ರೆಗಳನ್ನು ಪ್ರದರ್ಶಿಸುವ ಮೂಲಕ ಕೇರಳದ 3 ವರ್ಷದ ಪುಟ್ಟ ಮಗುವೊಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದೆ. ಮುಕೇಶ್ ಹಾಗೂ ಪ್ರಸೀತಾ ದಂಪತಿಯ ಕಿರಿಯ ಮಗಳಾದ ಧ್ವನಿ, ತನ್ನ ತಾಯಿ ಇತರರಿಗೆ ಭರತನಾಟ್ಯ ಕಲಿಸುವುದನ್ನು ನೋಡಿ, ಮುದ್ರೆಗಳನ್ನು ಕಲಿತ ಕಲಾವಿದೆ.
"ನನ್ನ ಡ್ಯಾನ್ಸ್ ಸ್ಟುಡಿಯೋ ಮನೆಯ ಪಕ್ಕದಲ್ಲೇ ಇದೆ. ಅವಳು ನಡೆಯಲು ಪ್ರಾರಂಭಿಸಿದಾಗಿನಿಂದ ಡ್ಯಾನ್ಸ್ ಸ್ಟುಡಿಯೋಗೆ ಬಂದು ನಾನು ನೃತ್ಯ ಕಲಿಸುವುದನ್ನು ನೋಡುತ್ತಿದ್ದಾಳೆ. ಜೊತೆಗೆ ಅವರಂತೆಯೇ ಅವಳೂ ಕುಣಿಯಲು ಪ್ರಯತ್ನಿಸುತ್ತಿದ್ದಳು. ಹೀಗೆ ನೋಡುತ್ತಾ ಒಂದು ಕೈ ಹಾಗೂ ಎರಡು ಕೈಗಳ ಎಲ್ಲಾ 52 ಮುದ್ರೆಗಳನ್ನು ಒಂದೇ ಬಾರಿಗೆ ಕಲಿತಳು. ತನ್ನ ಅಕ್ಕನೊಂದಿಗೆ ಕುಳಿತು ಮುದ್ರೆಗಳನ್ನು ಮಾಡುವುದು ಹಾಗೂ ಶ್ಲೋಕಗಳನ್ನು ಹೇಳಲು ಪ್ರಾರಂಭಿಸಿದಾಗ, ನೋಡಿ ನಮಗೇ ಆಶ್ಚರ್ಯವಾಯಿತು." ಎಂದು ಧ್ವನಿಯ ತಾಯಿ ಪ್ರಸೀತಾ ಹೆಮ್ಮೆಯಿಂದ ಹೇಳಿಕೊಂಡರು.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸುವುದರ ಜೊತೆಗೆ, ಧ್ವನಿ 2024ರ ಇಂಟರ್ನ್ಯಾಷನಲ್ ಕಿಡ್ಸ್ ಐಕಾನ್ ಪ್ರಶಸ್ತಿಯನ್ನು ಸಹ ಗೆದ್ದಿದ್ದಾಳೆ. ಅಷ್ಟೇ ಅಲ್ಲದೆ ಮಗುವಿನ ಅಸಾಧಾರಣ ಕೌಶಲ್ಯಕ್ಕಾಗಿ, ವಿಶೇಷ ಪ್ರತಿಭೆಗಾಗಿ ಯಂಗ್ ಅಚೀವರ್ಸ್ ಒಲಂಪಿಯಾಡ್ ರಾಷ್ಟ್ರೀಯ ಸ್ಪರ್ಧೆಯ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾಳೆ.
ಇದನ್ನೂ ಓದಿ: ಸ್ಟೀಲ್ ನಟ್ಗಳಲ್ಲಿ ಅರಳಿದ ಆದಿಯೋಗಿಯ ವಿಗ್ರಹ: ದಾಖಲೆಯ ಪುಟ ಸೇರಿದ ಉಡುಪಿ ಕಲಾವಿದನ ಕೈಚಳಕ