ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಜೀವಿತಾವಧಿ ಕೊನೆಗೊಂಡ ನಂತರ ಅದನ್ನು ಸುರಕ್ಷಿತ ಹಾಗೂ ಜವಾಬ್ದಾರಿಯುತವಾಗಿ ಕಕ್ಷೆಯಿಂದ ಹೊರತರುವ ಗುತ್ತಿಗೆಯನ್ನು ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಪಡೆದುಕೊಂಡಿದೆ. ಡಿಆರ್ಬಿಟ್ ಎಂದು ಕರೆಯಲಾಗುವ ಬಾಹ್ಯಾಕಾಶ ನಿಲ್ದಾಣವನ್ನು ಕಕ್ಷೆಯಿಂದ ಹೊರತರುವ ಕೆಲಸಕ್ಕಾಗಿ ನಾಸಾ ಸ್ಪೇಸ್ಎಕ್ಸ್ ಗೆ 843 ಮಿಲಿಯನ್ ಡಾಲರ್ ಮೊತ್ತ ಪಾವತಿಸಲಿದೆ.
ಒಪ್ಪಂದದ ಭಾಗವಾಗಿ, ಸ್ಪೇಸ್ ಎಕ್ಸ್ ಡಿಆರ್ಬಿಟ್ ವಾಹನವನ್ನು ಅಭಿವೃದ್ಧಿಪಡಿಸಿ ಅದನ್ನು ಅಮೆರಿಕಕ್ಕೆ ಪೂರೈಸಲಿದೆ. ಇದು ಬಾಹ್ಯಾಕಾಶ ನಿಲ್ದಾಣವನ್ನು ಡಿಆರ್ಬಿಟ್ ಮಾಡಲು ಸಹಾಯ ಮಾಡುತ್ತದೆ ಮತ್ತು ಡಿಆರ್ಬಿಟ್ ಸಮಯದಲ್ಲಿ ಭೂಮಿಯ ಮೇಲಿನ ಜನರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ಮಾಡುತ್ತದೆ. 2030ರಲ್ಲಿ ಕಾರ್ಯಾಚರಣೆಯ ಅವಧಿ ಮುಗಿದ ನಂತರ ಬಾಹ್ಯಾಕಾಶ ನಿಲ್ದಾಣವನ್ನು ನಿಯಂತ್ರಿತ ರೀತಿಯಲ್ಲಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಈ ವಾಹನವು ಹೊಂದಿರುತ್ತದೆ
"ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಕ್ಷೆ ಬದಲಾವಣೆಗಾಗಿ ಅಮೆರಿಕವು ಡಿಆರ್ಬಿಟ್ ವಾಹನ ಬಳಸುವುದರಿಂದ ನಾಸಾ ಮತ್ತು ಅದರ ಅಂತಾರಾಷ್ಟ್ರೀಯ ಪಾಲುದಾರರು ನಿಲ್ದಾಣದ ಕಾರ್ಯಾಚರಣೆಗಳ ಕೊನೆಯಲ್ಲಿ ಭೂಮಿಯ ಕೆಳ ಕಕ್ಷೆಯಲ್ಲಿ ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ನಿಲ್ದಾಣವನ್ನು ಇಳಿಸಲು ಸಾಧ್ಯವಾಗಲಿದೆ" ಎಂದು ವಾಷಿಂಗ್ಟನ್ನಲ್ಲಿರುವ ನಾಸಾ ಪ್ರಧಾನ ಕಚೇರಿಯ ಬಾಹ್ಯಾಕಾಶ ಕಾರ್ಯಾಚರಣೆ ಮಿಷನ್ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಕೆನ್ ಬೋವರ್ಸಾಕ್ಸ್ ಹೇಳಿದರು.