PM Modi Inaugurates BMGE 2025: ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಭಾರತದ ವಾಹನ ಉದ್ಯಮವು ಅದ್ಭುತವಾಗಿದೆ ಮತ್ತು ಭವಿಷ್ಯಕ್ಕೂ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಎಚ್‌ಡಿ ಕುಮಾರಸ್ವಾಮಿ, ಜಿತನ್ ರಾಮ್ ಮಾಂಝಿ, ಮನೋಹರ್ ಲಾಲ್, ಪಿಯೂಷ್ ಗೋಯಲ್ ಮತ್ತು ಹರ್ದೀಪ್ ಸಿಂಗ್ ಪುರಿ ಮತ್ತು ಆಟೋಮೊಬೈಲ್ ವಲಯದ ನಾಯಕರು ಉದ್ಘಾಟನೆ ವೇಳೆ ಸಾಥ್ ನೀಡಿದರು.
ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಭಾರತ ಇಂದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾದಾಗ ಭಾರತದ ವಾಹನ ಮಾರುಕಟ್ಟೆ ಎಲ್ಲಿರುತ್ತದೆ ಎಂದು ಊಹಿಸಿ. ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣವು ಮೊಬಿಲಿಟಿ ಕ್ಷೇತ್ರದ ಅಭೂತಪೂರ್ವ ವಿಸ್ತರಣೆಯ ಪ್ರಯಾಣವೂ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Speaking at the Bharat Mobility Global Expo 2025. Driven by the aspirations of the people, India's automobile sector is witnessing an unprecedented transformation. @bharat_mobility
— Narendra Modi (@narendramodi) January 17, 2025
https://t.co/w6LYEJy2gX
ನಾನು ಕೊನೆಯ ಬಾರಿ ನಿಮ್ಮೊಂದಿಗೆ ಬಂದಾಗ ಲೋಕಸಭಾ ಚುನಾವಣೆಗಳು ದೂರವಿರಲಿಲ್ಲ. ಆ ಸಮಯದಲ್ಲಿ ನಿಮ್ಮೆಲ್ಲರ ವಿಶ್ವಾಸದಿಂದಾಗಿ ಮುಂದಿನ ಬಾರಿಯೂ ನಾನು ಖಂಡಿತವಾಗಿಯೂ 'ಭಾರತ್ ಮೊಬಿಲಿಟಿ ಎಕ್ಸ್‌ಪೋ'ಗೆ ಬರುತ್ತೇನೆ ಎಂದು ಹೇಳಿದ್ದೆ. ದೇಶವು ನಮಗೆ ಮೂರನೇ ಬಾರಿಗೆ ಆಶೀರ್ವದಿಸಿತು. ನೀವೆಲ್ಲರೂ ನನ್ನನ್ನು ಇಲ್ಲಿಗೆ ಕರೆದಿದ್ದೀರಿ. ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈ ವರ್ಷ ಇಂಡಿಯಾ ಮೊಬಿಲಿಟಿ ಎಕ್ಸ್‌ಪೋದ ವ್ಯಾಪ್ತಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದರು.
ಮುಂದಿನ 5-6 ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿ ಅನೇಕ ಹೊಸ ವಾಹನಗಳು ಕೂಡ ಬಿಡುಗಡೆಯಾಗಲಿವೆ. ಇದು ಭಾರತದಲ್ಲಿ ಚಲನಶೀಲತೆಯ ಭವಿಷ್ಯದ ಬಗ್ಗೆ ಎಷ್ಟು ಸಕಾರಾತ್ಮಕತೆ ಇದೆ ಎಂಬುದನ್ನು ತೋರಿಸುತ್ತದೆ. ಇಂದಿನ ಭಾರತವು ಆಕಾಂಕ್ಷೆಗಳಿಂದ ತುಂಬಿದೆ, ಯುವಕರು ಶಕ್ತಿಯಿಂದ ತುಂಬಿದ್ದಾರೆ ಎಂದು ಪ್ರಧಾನಿ ಹೇಳಿದರು.
ಭಾರತದ ವಾಹನ ಉದ್ಯಮದಲ್ಲಿ ನಾವು ಈ ಆಕಾಂಕ್ಷೆಗಳನ್ನು ನೋಡುತ್ತೇವೆ. ಕಳೆದ ವರ್ಷದಲ್ಲಿ, ಭಾರತದ ವಾಹನ ಉದ್ಯಮವು ಸುಮಾರು ಶೇಕಡ 12 ರಷ್ಟು ಬೆಳೆದಿದೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಎಂಬ ಮಂತ್ರವನ್ನು ಅನುಸರಿಸಿ, ಈಗ ರಫ್ತು ಕೂಡ ಹೆಚ್ಚುತ್ತಿದೆ. ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣವು ಅಭೂತಪೂರ್ವ ಪರಿವರ್ತನೆ ಮತ್ತು ಚಲನಶೀಲತೆಯ ಕ್ಷೇತ್ರದ ಹಲವು ಪಟ್ಟು ವಿಸ್ತರಣೆಯ ಪ್ರಯಾಣವಾಗಲಿದೆ ಎಂದು ಪ್ರಧಾನಿ ಹೇಳಿದರು.
ಭಾರತದಲ್ಲಿ ಪ್ರತಿ ವರ್ಷ ಮಾರಾಟವಾಗುವ ವಾಹನಗಳ ಸಂಖ್ಯೆಯಷ್ಟು ಜನಸಂಖ್ಯೆಯನ್ನು ಅನೇಕ ದೇಶಗಳು ಹೊಂದಿಲ್ಲ ಎಂಬುದು ಗಮನಾರ್ಹ. ಕಳೆದ ಬಾರಿ 800 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು, 1.5 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು. ಈ ಬಾರಿ ಭಾರತ್ ಮಂಟಪದ ಜೊತೆಗೆ ಈ ಪ್ರದರ್ಶನವನ್ನು ದ್ವಾರಕಾದ ಯಶೋಭೂಮಿ ಮತ್ತು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್‌ನಲ್ಲಿಯೂ ಆಯೋಜಿಸಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಬೆಂಬಲದೊಂದಿಗೆ ನಡೆಯುತ್ತಿರುವ ಈ ಜಾಗತಿಕ ಎಕ್ಸ್‌ಪೋವನ್ನು, ಭಾರತೀಯ ಆಟೋಮೊಬೈಲ್ ತಯಾರಕರ ಸಂಘ (SIAM), ಭಾರತೀಯ ಆಟೋಮೋಟಿವ್ ಕಾಂಪೊನೆಂಟ್ ತಯಾರಕರ ಸಂಘ (ACMA), ಭಾರತ ಇಂಧನ ಸಂಗ್ರಹ ಒಕ್ಕೂಟ (IESA), ಆಟೋಮೋಟಿವ್ ಟೈರ್ ತಯಾರಕರ ಸಂಘ (ATMA), ಭಾರತೀಯ ನಿರ್ಮಾಣ ಸಲಕರಣೆ ತಯಾರಕರ ಸಂಘ (ICEMA), ನಾಸ್ಕಾಮ್, ಭಾರತೀಯ ಉಕ್ಕು ಸಂಘ, ಭಾರತದ ವಸ್ತು ಮರುಬಳಕೆ ಸಂಘ ಮತ್ತು CII ಸೇರಿದಂತೆ ಉದ್ಯಮ ಸಂಘಗಳು ಆಯೋಜಿಸುತ್ತಿವೆ. ಇದು 5,100 ಅಂತರರಾಷ್ಟ್ರೀಯ ಭಾಗವಹಿಸುವವರನ್ನು ಒಳಗೊಂಡಿರುತ್ತದೆ ಮತ್ತು ಪ್ರಪಂಚದಾದ್ಯಂತ 5 ಲಕ್ಷಕ್ಕೂ ಹೆಚ್ಚು ಸಂದರ್ಶಕರನ್ನು ಆಕರ್ಷಿಸುವ ಅಂದಾಜಿದೆ.
ಓದಿ: ಇಂದಿನಿಂದ ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ: ಪ್ರಧಾನಿ ಮೋದಿಯಿಂದ ಉದ್ಘಾಟನೆ - ಹೆಚ್ಡಿಕೆ