ಬೆಂಗಳೂರು: ನಗರದ ಸಸ್ಯಕಾಶಿ ಲಾಲ್ಬಾಗ್ನಲ್ಲಿ ನಡೆಯುತ್ತಿರುವ 217ನೇ ಫಲಪುಷ್ಪ ಪ್ರದರ್ಶನದ ಅಂಗವಾಗಿ ಹಮ್ಮಿಕೊಂಡಿದ್ದ ಇಕೆಬಾನ, ಪುಪ್ಪಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡನೆ, ಥಾಯ್ ಆರ್ಟ್‌ನ ಪೂರಕ ಕಲೆಗಳ ಪ್ರದರ್ಶನವನ್ನು ಬಹುಭಾಷಾ ನಟಿ ಪ್ರೇಮಾ ಶನಿವಾರ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಹೂವು, ಬಾಳೆಎಲೆ, ತೆಂಗಿನ ಗರಿ, ತರಕಾರಿಗಳಲ್ಲಿ ಬಗೆ ಬಗೆಯ ವಿನ್ಯಾಸದ ಕಲಾಕೃತಿಗಳನ್ನು ಮಾಡುವುದೆಂದರೆ ಇದೊಂದು ರೀತಿ ಧ್ಯಾನ ಇದ್ದಂತೆ ಎಂದು ಹೇಳಿದರು.
ಕೆತ್ತನೆಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ ನಟಿ: ಹೂವು, ಬಾಳೆ ಎಲೆ ಮತ್ತು ತೆಂಗಿನ ಗರಿ ಹಾಗೂ ತರಕಾರಿಗಳಲ್ಲಿ ರಚಿಸಿರುವ ಜೋಡಣೆಗಳು ಮತ್ತು ಕೆತ್ತನೆಗಳನ್ನು ನೋಡಿ ಅವರು ಅಚ್ಚರಿ ವ್ಯಕ್ತಪಡಿಸಿದರು.
ನಾನು ವಾಯುವಿಹಾರಕ್ಕೆ ನಿತ್ಯ ಇಲ್ಲಿ ಬರುತ್ತಿದ್ದೆ: ಅಲ್ಲದೇ, ಈ ಹಿಂದೆ ನಾನು ನಿತ್ಯ ವಾಯುವಿಹಾರ ಮಾಡಲು ಲಾಲ್‌ಬಾಗ್‌ಗೆ ಬರುತ್ತಿದ್ದೆ. ವಾಕ್ ಮಾಡುತ್ತಿದ್ದುದು, ಇಲ್ಲಿನ ಹಸಿರು ಸೊಬಗು ಅದೆಲ್ಲ ನೆನಪಾಗುತ್ತಿದೆ. ಈ ಸೃಜನಶೀಲತೆ ಕಂಡಾಗ ನಮಗೂ ಫ್ರೆಶ್‌ನೆಸ್ ಸಿಗುತ್ತದೆ. ಚಿತ್ರಕಲೆ, ಕಲಾಕೃತಿಗಳನ್ನು ಮಾಡಲು ತುಂಬಾ ಸಮಯ ಬೇಕಾಗುತ್ತದೆ. ಇದೊಂದು ತರಹ ಮೆಡಿಟೇಷನ್ ಇದ್ದಂತೆ. ಗಾರ್ಡನಿಂಗ್ ಮಾಡಲು ತುಂಬಾ ತಾಳ್ಮೆ ಬೇಕಾಗುತ್ತದೆ ಎಂದರು.
ಫಲಪುಷ್ಪ ಪ್ರದರ್ಶನ ವಿಜೃಂಭಣೆಯಿಂದ ನಡೆಯಲಿ: ಪ್ರಸ್ತುತ ಉದ್ಯಾನ ನೋಡಿ ಪ್ರೇಮ ಹೆಚ್ಚಾಗಿದೆ. ಜನ ಏಕೆ ಗಾರ್ಡನ್ ಇಷ್ಟ ಪಡುತ್ತಾರೆ ಎಂದು ಈಗ ಅರ್ಥ ಆಗುತ್ತಿದೆ. ನಮ್ಮ ಅಮ್ಮ ಗಾರ್ಡನ್ ಅಂದ್ರೆ ತುಂಬಾ ಇಷ್ಟ ಪಡುತ್ತಾರೆ. ಗಾರ್ಡನಿಂಗ್ ಅನ್ನು ಹೀಗೂ ಮಾಡಬಹುದು ಎಂದು ಹೇಳಿಕೊಟ್ಟಿದ್ದಾರೆ. ಫಲಪುಷ್ಪ ಪ್ರದರ್ಶನ ವಿಜೃಂಭಣೆಯಿಂದ ನಡೆಯಲಿ, ಹೆಚ್ಚು ಹೆಚ್ಚು ಜನ ಪುಷ್ಪ ಸೊಬಗನ್ನು ಕಣ್ತುಂಬಿಕೊಳ್ಳಲಿ ಎಂದರು.
ಪ್ರತ್ಯೇಕ ಪ್ರವೇಶ ಶುಲ್ಕ ಇರುವುದಿಲ್ಲ: 100ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಂಡಿದ್ದವು. ಇದಕ್ಕೆ ಪ್ರತ್ಯೇಕ ಪ್ರವೇಶ ಶುಲ್ಕ ಇರುವುದಿಲ್ಲ. ಫಲಪುಷ್ಪ ಪ್ರದರ್ಶನಕ್ಕೆ ಪಡೆದ ಟಿಕೆಟ್‌ನಲ್ಲೇ ಪೂರಕ ಕಲೆಗಳನ್ನೂ ವೀಕ್ಷಿಸಬಹುದು. ಭಾನುವಾರವೂ ಈ ಪ್ರದರ್ಶನ ನಡೆಯುತ್ತದೆ. ಲಾಲ್‌ಬಾಗ್ ಬಂಡೆ ಸಮೀಪದಲ್ಲಿರುವ (ಸಿದ್ದಾಪುರ ಗೇಟ್ ಬಳಿ) ಮಾಹಿತಿ ಕೇಂದ್ರದಲ್ಲಿ ನಡೆಯುತ್ತಿದೆ.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್, ಉಪ ನಿರ್ದೇಶಕರಾದ ಬಾಲಕೃಷ್ಣ, ಕುಸುಮಾ ಮತ್ತಿತರರು ಉಪಸ್ಥಿತರಿದ್ದರು. ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷ ಲಾಲ್ ಬಾಗ್‌ನಲ್ಲಿ ಫಲಪುಷ್ಟ ಪ್ರದರ್ಶನ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಗಣತಂತ್ರದ ಭಾಗವಾಗಿ ಈ ಪ್ರದರ್ಶನ ಏರ್ಪಡಿಸಲಾಗಿದೆ.
ಇದನ್ನೂ ಓದಿ: ವಾಲ್ಮೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಚಾಲನೆ