ಬಳ್ಳಾರಿ: 7.20 ಕೋಟಿ ರೂ.ಮೌಲ್ಯದ 24 ಸಾವಿರ ಕ್ವಿಂಟಾಲ್ ಜೋಳದ ಚೀಲದಲ್ಲಿ ಹುಳುಗಳು ಪತ್ತೆಯಾದ ಘಟನೆ ಬಳ್ಳಾರಿಯ ಕೆಎಸ್‌ಡಬ್ಲ್ಯೂಸಿ ಗೋಡಾನ್ನಲ್ಲಿ ನಡೆದಿದೆ. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನಿನ್ನೆ (ಶುಕ್ರವಾರ) ಕೆಎಸ್‌ಡಬ್ಲ್ಯೂಸಿಯ ಯುನಿಟ್ -2 ರ ಗೋದಾಮಿಗೆ ಭೇಟಿ ನೀಡಿದಾಗ ಜೋಳದ ಚೀಲದಲ್ಲಿ ಹುಳುಗಳು ಪತ್ತೆಯಾಗಿದೆ. ತಲಾ 50 ಕೆಜಿ ತೂಕದ 48,000 ಚೀಲ ಜೋಳದಲ್ಲಿ ಹುಳುಗಳು ಕಂಡುಬಂದಿವೆ.
ನ್ಯಾಯಮೂರ್ತಿ ವೀರಪ್ಪ, ಉಪ ನೋಂದಣಾಧಿಕಾರಿ ಅರವಿಂದ್ ಎನ್.ವಿ ಪ್ರಶ್ನಿಸಿದಾಗ, ಕೆಎಸ್‌ಡಬ್ಲ್ಯುಸಿಯ ಬಳ್ಳಾರಿ ಘಟಕದ ವ್ಯವಸ್ಥಾಪಕಿ ಶರಾವತಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸಕಿನಾ ಅವರು 2024 ಮಾರ್ಚ್ 29 ರಂದು ಭಾರತೀಯ ಆಹಾರ ನಿಗಮದಿಂದ ಜೋಳ ಸೇವನೆಗೆ ಯೋಗ್ಯವಾಗಿದೆ ಎಂದು ಪ್ರಮಾಣಪತ್ರವನ್ನು ಪಡೆದಿದ್ದೇವೆ, ಸರ್ಕಾರದ ಆದೇಶ ಪಾಲನೆ ಮಾಡಿದ್ದೇವೆ ಎಂದು ಉತ್ತರಿಸಿದ್ದಾರೆ.
ಜೋಳದ ಚೀಲದಲ್ಲಿ ಹುಳುಗಳನ್ನು ಕಂಡ ಉಪ ಲೋಕಾಯುಕ್ತರು, ಇಂತಹ ಜೋಳ ಪ್ರಾಣಿಗಳು ಸಹ ತಿನ್ನಲು ಯೋಗ್ಯವಲ್ಲ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 48,000 ಚೀಲ ಜೋಳ ವ್ಯರ್ಥವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಮೂರ್ತಿ ಬಿ. ವೀರಪ್ಪ ಅವರ ಮಾತಿನಿಂದ ಅಸಮಾಧಾನಗೊಂಡ ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸಕಿನಾ, ಗೋದಾಮಿಗೆ ಭೇಟಿ ನೀಡಿದ್ದನ್ನು ದೃಢೀಕರಿಸಲು ಜಿಪಿಎಸ್‌ಗೆ ಲಿಂಕ್ ಮಾಡುವ ಫೋಟೋವನ್ನು ಒದಗಿಸುವಂತೆ ಕೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವೀರಪ್ಪ, ವ್ಯವಸ್ಥಾಪಕರು ತಮ್ಮ ಭೇಟಿಯ ಪುರಾವೆಯನ್ನು ಕೋರಿದ್ದಾರೆ. ಇದು ಅವರು ನಮ್ಮನ್ನು ಪ್ರಶ್ನಿಸುವ ಹಂತವನ್ನು ತಲುಪಿದ್ದಾರೆಂದು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಕುರಿತು ಸಂಬಂಧಪಟ್ಟ ಸಚಿವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತೆರಿಗೆದಾರರ ಹಣವನ್ನು ಬಳಸಿ ಜೋಳವನ್ನು ಖರೀದಿಸಲಾಗಿದ್ದು, ಅದನ್ನು ಈ ರೀತಿ ವ್ಯರ್ಥ ಮಾಡಬಾರದು. ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಥಳದಲ್ಲಿಯೇ ದೂರು ದಾಖಲಿಸಿಕೊಂಡರು.
ಇದನ್ನೂ ಓದಿ: ಬಿಬಿಎಂಪಿ ಕಚೇರಿಯಲ್ಲಿ ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರು: ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು
ಇದನ್ನೂ ಓದಿ: ಶಿವಮೊಗ್ಗ: ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೇಸ್ ವರ್ಕರ್