ನವದೆಹಲಿ: ಸಾಫ್ಟ್ವೇರ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಎಲೋನ್ ಮಸ್ಕ್ ಒಡೆತನದ ಟೆಸ್ಲಾ 2022 ಮತ್ತು 2023 ರ ನಡುವೆ ಆಸ್ಟ್ರೇಲಿಯಾದಲ್ಲಿ ತಯಾರಿಸಿದ 4,000 ಕ್ಕೂ ಹೆಚ್ಚು ಮಾಡೆಲ್ 3 ಮತ್ತು ಮಾಡೆಲ್ ವೈ ವಾಹನಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಮೂಲಸೌಕರ್ಯ, ಸಾರಿಗೆ, ಪ್ರಾದೇಶಿಕ ಅಭಿವೃದ್ಧಿ, ಸಂವಹನ ಮತ್ತು ಕಲೆಗಳ ಇಲಾಖೆ (ಡಿಐಟಿಆರ್ಸಿಎ) ಪ್ರಕಾರ, 4,382 ವಾಹನಗಳಲ್ಲಿ ಸಾಫ್ಟ್ವೇರ್ ಸಮಸ್ಯೆ ಕಾಣಿಸಿಕೊಂಡಿದ್ದು, ಇದರಿಂದ ಶೀತ ತಾಪಮಾನದಲ್ಲಿ ಚಾಲನೆ ಮಾಡುವಾಗ ಕಾರಿನ ಸ್ಟೀರಿಂಗ್ ವೀಲ್ ಬಳಸುವುದು ಕಷ್ಟಕರವಾಗುತ್ತಿದೆ.
"ಸಾಫ್ಟ್ವೇರ್ ಸಮಸ್ಯೆಯಿಂದಾಗಿ ತಂಪಾದ ತಾಪಮಾನದಲ್ಲಿ ವಾಹನವನ್ನು ಆಪರೇಟ್ ಮಾಡುವಾಗ ಸ್ಟೀರಿಂಗ್ ವೀಲ್ ಹಿಡಿದಂತಾಗುತ್ತದೆ" ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಆದರೆ ಈ ಅಸಮರ್ಪಕ ಕಾರ್ಯನಿರ್ವಹಣೆಯ ಹೊರತಾಗಿಯೂ, ವಾಹನಗಳನ್ನು ನಿರ್ವಹಿಸುವಾಗ ಚಾಲಕರಿಗೆ ಗಂಭೀರ ಗಾಯವಾಗುವ ಅಪಾಯವಿಲ್ಲ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. "ದೋಷವು ವಾಹನದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಅದು ಹೇಳಿದೆ.
ಸಮಸ್ಯೆ ಹೊಂದಿದ ಕಾರುಗಳ ಮಾಲೀಕರು ವಾಹನ ಸಾಫ್ಟ್ವೇರ್ ಆವೃತ್ತಿಯನ್ನು ಪರೀಕ್ಷಿಸಲು ಮತ್ತು ಆವೃತ್ತಿ 2023.38 ಅಥವಾ ನಂತರದ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಲು ಟೆಸ್ಲಾವನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ. ಇನ್ನು ಸಾಮಾನ್ಯವಾಗಿ ಡ್ಯಾಶ್ ಬೋರ್ಡ್ ಬಳಸಿಕೊಂಡು ತಮ್ಮ ವಾಹನದ ಸಾಫ್ಟ್ವೇರ್ ಅಪ್ಡೇಟ್ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ.