Suicide Capsule: ಸಣ್ಣ ಯಂತ್ರದಂತೆ ವಿನ್ಯಾಸಗೊಳಿಸಲಾದ 'ಸುಸೈಡ್ ಕ್ಯಾಪ್ಸುಲ್' ಸಹಾಯದಿಂದ ಸ್ವಿಟ್ಜರ್ಲೆಂಡ್‌ನಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ, ಈ 'ಆತ್ಮಹತ್ಯೆ ಕ್ಯಾಪ್ಸುಲ್' ಇದೀಗ ವಿಶ್ವಾದ್ಯಂತ ಸಂಚಲನ ಮೂಡಿಸಿದೆ.
ಇದು ಹೇಗೆ ಕೆಲಸ ಮಾಡುತ್ತೆ?:ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಆ ಸ್ಥಳಕ್ಕೆ ಹೋಗುತ್ತಾರೆ. ಸುಸೈಡ್ ಕ್ಯಾಪ್ಸುಲ್ನಲ್ಲಿ ಮಲಗಲು ಸಿಬ್ಬಂದಿ ಸೂಚಿಸುತ್ತಾರೆ. ವ್ಯಕ್ತಿ ಅದರಲ್ಲಿ ಮಲಗಿದ ಬಳಿಕ ಕ್ಯಾಪ್ಸುಲ್ ಮುಚ್ಚಲಾಗುತ್ತದೆ. ಮುಚ್ಚಿದ ಕ್ಯಾಪ್ಸುಲ್ನಲ್ಲಿ ಮಲಗಿರುವ ವ್ಯಕ್ತಿ ಅದರಲ್ಲಿರುವ ಸಾರಜನಕ ಅನಿಲ ಹರಡುವ ಗುಂಡಿಯನ್ನು ತಾವೇ ಒತ್ತುತ್ತಾರೆ. ಆಗ ಆತ ನಿದ್ರೆಗೆ ಜಾರುತ್ತಾರೆ. ಬಳಿಕ ಕೆಲವೇ ನಿಮಿಷಗಳಲ್ಲಿ ಉಸಿರುಗಟ್ಟಿ ಸಾವನ್ನಪ್ಪುತ್ತಾರೆ. ನೋವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಕಂಪನಿಯೊಂದು ಈ ಕ್ಯಾಪ್ಸುಲ್ ತಯಾರಿಸಿದೆ. ಆದರೆ ಇದರಿಂದ ಸಾಕಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಭಯ, ಆತಂಕ ಎದುರಾಗಿದೆ.
ಪೊಲೀಸರಿಂದ ಕಠಿಣ ಕ್ರಮ: ಸ್ವಿಟ್ಜರ್ಲೆಂಡ್ ಪೊಲೀಸರು ಹೊಸ 'ಆತ್ಮಹತ್ಯಾ ಕ್ಯಾಪ್ಸುಲ್'ನಲ್ಲಿ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಈಗಾಗಲೇ ಹಲವರನ್ನು ಬಂಧಿಸಿದ್ದಾರೆ.
ಸ್ಕಾಫ್‌ಹೌಸೆನ್ ಕ್ಯಾಂಟನ್ ಪ್ರದೇಶದಲ್ಲಿನ ಪ್ರಾಸಿಕ್ಯೂಟರ್‌ಗಳಿಗೆ ಕಾನೂನು ಸಂಸ್ಥೆಯೊಂದು ಸೋಮವಾರ ಅರಣ್ಯ ಪ್ರದೇಶದಲ್ಲಿರುವ ಕ್ಯಾಬಿನ್‌ನಲ್ಲಿ ಕ್ಯಾಪ್ಸುಲ್ ಬಳಸಿ ಆತ್ಮಹತ್ಯೆ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾಗಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಸಹಕರಿಸಿದ ಶಂಕೆಯ ಮೇರೆಗೆ ಹಲವರನ್ನು ಸೆರೆ ಹಿಡಿಯಲಾಗಿದ್ದು, ಪ್ರಾಸಿಕ್ಯೂಟರ್‌ಗಳು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.