ಗುವಾಹಟಿ(ಅಸ್ಸಾಂ): ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಉಮ್ರಾಂಗ್ಸೊದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ 9 ಮಂದಿ ಕಾರ್ಮಿಕರ ರಕ್ಷಣೆಗೆ ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಮುಂದಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಹಿರಿಯ ಸೇನಾಧಿಕಾರಿ, ರಕ್ಷಣಾ ಸಾಧನಗಳೊಂದಿಗೆ ಇಂಜಿನಿಯರ್ ಟಾಸ್ಕ್ ಫೋರ್ಸ್, ಡೈವರ್ಸ್ (ಮುಳುಗು ತಜ್ಞರು), ವೈದ್ಯಕೀಯ ತಂಡ, ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಉಮ್ರಾಂಗ್ಸೊದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಿದ್ದಾರೆ.
ಸೋಮವಾರ ಕಾರ್ಮಿಕರು ಸಿಲುಕಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದ ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾ ಶರ್ಮಾ, ಉಮ್ರಾಂಗ್ಸೊ ಸ್ಥಳದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಕನಿಷ್ಠ 9 ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ ಎಂದಿದ್ದರು.
ಎಷ್ಟು ಜನ ಗಣಿಯಲ್ಲಿ ಸಿಲುಕಿದ್ದಾರೆ ಎಂಬ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ 9 ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದ್ದು, ಈ ಪೈಕಿ ಒಬ್ಬಾತ ನೇಪಾಳ ಮತ್ತು ಇನ್ನೋರ್ವ ಪಶ್ಚಿಮ ಬಂಗಾಳ ಹಾಗೂ ಉಳಿದವರು ಅಸ್ಸಾಂನ ವಿವಿಧ ಪ್ರದೇಶದವರು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ರಾಜ್ಯ ಸರ್ಕಾರ ಸೇನೆಯ ಸಹಾಯ ಕೋರಿತ್ತು. ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದ ಸಿಎಂ ಶರ್ಮಾ, ಸದ್ಯ ರಾಜ್ಯದಲ್ಲಿ ಸಾಗುತ್ತಿರುವ ರಕ್ಷಣಾ ಕಾರ್ಯಕ್ಕೆ ನೆರವಾಗುವಂತೆ ಭಾರತೀಯ ಸೇನೆಗೆ ನಾನು ಮನವಿ ಮಾಡುತ್ತೇನೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕೂಡ ಎಲ್ಲಾ ರೀತಿಯ ಪ್ರಯತ್ನ ನಡೆಸಲು ಮುಂದಾಗಿದೆ ಎಂದು ತಿಳಿಸಿದ್ದರು.
ಇದಕ್ಕೂ ಮುನ್ನ, ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೌಶಿಕ್ ರೈ ಘಟನಾ ಸ್ಥಳಕ್ಕೆ ತೆರಳಿದ್ದರು. ಉಮಾಂಗ್ಸೊ ಘಟನೆ ಬೇಸರ ಮೂಡಿಸಿದೆ. ಎಷ್ಟು ಕಾರ್ಮಿಕರು ಗಣಿಯೊಳಗೆ ಸಿಲುಕಿದ್ದಾರೆ ಎಂಬ ನಿಖರ ಮಾಹಿತಿ ಇಲ್ಲ. ಡಿಸಿ, ಎಸ್ಪಿ ಮತ್ತು ನನ್ನ ಸಹೋದ್ಯೋಗಿ ಕೌಶಕ್ ರೈ ಸ್ಥಳದಲ್ಲಿದ್ದಾರೆ. ಕಾರ್ಮಿಕರು ಸುರಕ್ಷಿತವಾಗಿ ಮರಳುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಸೋಮವಾರ ತಿಳಿಸಿದ್ದರು.
ಕಲ್ಲಿದ್ದಲು ಗಣಿಗಾರಿಕೆಯ ವೇಳೆ ನೀರು ಉಕ್ಕಿದ ಪರಿಣಾಮ 10ರಿಂದ 15 ಕಾರ್ಮಿಕರು ಸಿಲುಕಿದ್ದರು. ಇದರಲ್ಲಿ ಹಲವರು ಹೊರಬಂದಿದ್ದು, 9 ಕಾರ್ಮಿಕರು ಇನ್ನೂ ಅಲ್ಲಿಯೇ ಸಿಲುಕಿರುವ ಸಾಧ್ಯತೆ ಇದೆ.(ಐಎಎನ್ಎಸ್)
ಇದನ್ನೂ ಓದಿ: ಹಾರಾಟದ ವೇಳೆ ಎಂಜಿನ್ ಬಂದ್; ಬೆಂಗಳೂರಿನಲ್ಲಿ ವಿಮಾನ ತುರ್ತು ಲ್ಯಾಂಡಿಂಗ್