New Semiconductor Unit:ದೇಶದಲ್ಲಿ ಮತ್ತೊಂದು ಸೆಮಿಕಂಡಕ್ಟರ್ ಘಟಕಕ್ಕೆ ಭಾರತ ಸರ್ಕಾರ ಸೋಮವಾರ ಅನುಮೋದನೆ ನೀಡಿದೆ. ಗುಜರಾತ್‌ನ ಸನಂದ್‌ನಲ್ಲಿ ಈ ಘಟಕವನ್ನು ಸ್ಥಾಪಿಸಲಾಗುವುದು. ಇದರೊಂದಿಗೆ ದೇಶದ ಮೊದಲ ಸೆಮಿಕಂಡಕ್ಟರ್ ಚಿಪ್ ಕೂಡ 2025ರ ವೇಳೆಗೆ ತಯಾರಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಘಟಕವನ್ನು ಕೇನ್ಸ್ ಸೆಮಿಕಾನ್ ಸ್ಥಾಪಿಸುತ್ತದೆ. ಇದು ಭಾರತದಲ್ಲಿನ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಲ್ಲಿ ಒಂದು ದೊಡ್ಡ ಹೆಜ್ಜೆ ಎಂದು ಹೇಳಲಾಗುತ್ತದೆ.
60 ಲಕ್ಷ ಚಿಪ್‌ಗಳ ಉತ್ಪಾದನೆ ಗುರಿ: ಭಾರತ್ ಸೆಮಿಕಂಡಕ್ಟರ್ ಮಿಷನ್ (ಐಎಸ್‌ಎಂ) ಅಡಿಯಲ್ಲಿ ಉದ್ದೇಶಿತ ಘಟಕವು ದಿನಕ್ಕೆ ಸುಮಾರು 60 ಲಕ್ಷ ಚಿಪ್‌ಗಳನ್ನು ಉತ್ಪಾದಿಸುತ್ತದೆ. ಈ ಘಟಕದಲ್ಲಿ ತಯಾರಿಸಲಾದ ಚಿಪ್‌ಗಳು ಕೈಗಾರಿಕಾ, ವಾಹನ, ಎಲೆಕ್ಟ್ರಿಕ್ ವಾಹನಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್, ದೂರಸಂಪರ್ಕ ಮತ್ತು ಮೊಬೈಲ್ ಫೋನ್‌ಗಳಂತಹ ವಿಭಾಗಗಳನ್ನು ಒಳಗೊಂಡಂತೆ ವಿವಿಧ ಅಪ್ಲಿಕೇಶನ್‌ಗಳನ್ನು ಪೂರೈಸುತ್ತದೆ. ಪ್ರತಿಯೊಂದು ಸಾಧನಕ್ಕೂ 'ಮೇಡ್ ಇನ್ ಇಂಡಿಯಾ' ಚಿಪ್‌ಗಳನ್ನು ಅಭಿವೃದ್ಧಿಪಡಿಸುವ ಕನಸನ್ನು ಈಡೇರಿಸುವ ಸಾಮರ್ಥ್ಯವನ್ನು ದೇಶ ಹೊಂದಿದೆ. ಈ ವರ್ಷದ ಅಂತ್ಯದ ವೇಳೆಗೆ ಸ್ವದೇಶಿ ನಿರ್ಮಿತ ಮೊದಲ ಚಿಪ್ ದೇಶಕ್ಕೆ ಬರಲಿದೆ ಎಂದು ಮೋದಿ ಹೇಳಿದ್ದಾರೆ.
ಮೂರು ಸೆಮಿಕಂಡಕ್ಟರ್ ಯೋಜನೆಗಳಿಗೆ ಅಡಿಪಾಯ:ಟಾಟಾ ಎಲೆಕ್ಟ್ರಾನಿಕ್ಸ್ ಗುಜರಾತ್‌ನ ಧೋಲೆರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಮತ್ತು ಅಸ್ಸಾಂನ ಮೊರಿಗಾಂವ್‌ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸುತ್ತಿದೆ. ಸಿಜಿ ಪವರ್ ಸನಂದ್‌ನಲ್ಲಿ ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸುತ್ತಿದೆ. ಈ ಘಟಕಗಳು ಲಕ್ಷಾಂತರ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಪ್ರಕಾರ, ಎಲ್ಲಾ ನಾಲ್ಕು ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣವು ವೇಗದಲ್ಲಿ ಪ್ರಗತಿಯಲ್ಲಿದೆ. “ಈ ನಾಲ್ಕು ಘಟಕಗಳು ಸರಿಸುಮಾರು 1.5 ಲಕ್ಷ ಕೋಟಿ ಹೂಡಿಕೆಯನ್ನು ಒಳಗೊಂಡಿರುತ್ತವೆ. ಈ ಘಟಕಗಳ ಒಟ್ಟು ಸಾಮರ್ಥ್ಯವು ದಿನಕ್ಕೆ ಸುಮಾರು 7 ಕೋಟಿ ಚಿಪ್‌ಗಳನ್ನು ತಯಾರಿಸಲಿವೆ,” ಎಂದು ಸಚಿವಾಲಯ ಹೇಳಿಕೊಂಡಿದೆ.
ಸೆಮಿಕಂಡಕ್ಟರ್ ಹಬ್ ಆಗಲಿದೆ ಭಾರತ: ಭಾರತದಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ವ್ಯವಸ್ಥೆಗಳ ಅಭಿವೃದ್ಧಿಗಾಗಿ 2021 ರಲ್ಲಿ ಒಟ್ಟು 76,000 ಕೋಟಿ ರೂ.ಗಳ ವೆಚ್ಚದೊಂದಿಗೆ ಕಾರ್ಯಕ್ರಮವನ್ನು ಸೂಚಿಸಲಾಗಿದೆ. ವರದಿಯ ಪ್ರಕಾರ, ಭಾರತದ ಸೆಮಿಕಂಡಕ್ಟರ್-ಸಂಬಂಧಿತ ಮಾರುಕಟ್ಟೆಯು 2026 ರಲ್ಲಿ $64 ಬಿಲಿಯನ್ ತಲುಪಲಿದೆ. ಮುಂದಿನ ಐದು ವರ್ಷಗಳಲ್ಲಿ ದೇಶವು ವಿಶ್ವದ ಅತಿದೊಡ್ಡ ಸೆಮಿಕಂಡಕ್ಟರ್ ಹಬ್‌ಗಳಲ್ಲಿ ಒಂದಾಗಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಹೇಳಿದ್ದಾರೆ.
ಓದಿ:ಹುಡುಗಿಯರೇ ಸ್ಪೈ ಕ್ಯಾಮರಾಗಳನ್ನು ಪತ್ತೆ ಮಾಡುವುದು ಹೇಗೆ? ಇಲ್ಲಿವೆ ನಿಮಗೆ ಸೇಫ್ಟಿ ಟಿಪ್ಸ್ - How To Detect Spy Cameras