Domestic EV Manufacturing: ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಹಣಕಾಸು ಸಚಿವರು ಇಂದು ಮಂಡಿಸಿದರು. ಈ ಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಇವಿ ವಲಯವನ್ನು ವಿಸ್ತರಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರಲ್ಲಿ ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯು ಒಂದಾಗಿದೆ.
ಲಿಥಿಯಂ-ಐಯಾನ್ ಬ್ಯಾಟರಿ ಉತ್ಪಾದನೆಯಲ್ಲಿ ಬಳಸುವ ಬಂಡವಾಳ ಸರಕುಗಳ ಮೇಲಿನ ಸುಂಕವನ್ನು ಕಡಿತಗೊಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಇದು ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಲಿಥಿಯಂ-ಐಯಾನ್ ಬ್ಯಾಟರಿಗಳ ದೇಶಿಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ನೀವು ಮೊದಲಿಗಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಮತ್ತು ಮೊಬೈಲ್ ಫೋನ್ಗಳನ್ನು ಖರೀದಿಸಬಹುದು ಎಂದು ಸಚಿವರು ಹೇಳಿದರು.
ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಯೋಜಿಸುತ್ತಿರುವವರಿಗೆ ಸರ್ಕಾರದಿಂದ ಖುಷಿ ಸುದ್ದಿ ಹೊರ ಬಿದ್ದಿದೆ. 2024 ರಲ್ಲಿ ಆಟೋ ವಲಯದಲ್ಲಿ ಕಂಡುಬಂದ ನಿಧಾನಗತಿಯು ಈಗ ವೇಗ ಪಡೆಯುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ವಾಹನ ಕಂಪನಿಗಳ ಜತೆಗೆ ಜನಸಾಮಾನ್ಯರ ಜೇಬಿಗೂ ಸರ್ಕಾರ ಮುತುವರ್ಜಿ ವಹಿಸಿರುವುದು ಗಮನಾರ್ಹ. ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಯೋಜಿಸುತ್ತಿರುವ ಜನರು ಎಲೆಕ್ಟ್ರಿಕ್ ವಾಹನಗಳು ಅಗ್ಗವಾಗುವುದರ ಲಾಭವನ್ನು ಪಡೆಯಲಿದ್ದಾರೆ. ಅಷ್ಟೇ ಅಲ್ಲ, ಇದರಿಂದಾಗಿ ಕಂಪನಿಗಳ ಇವಿ ಮಾರಾಟವೂ ಹೆಚ್ಚಾಗಬಹುದು.
ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಬಳಸಲಾಗುವ 35 ಹೆಚ್ಚುವರಿ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ತೆಗೆದುಹಾಕಲು ಬಜೆಟ್‌ನಲ್ಲಿ ಸೀತಾರಾಮನ್ ಘೋಷಿಸಿದರು. ಇದರಿಂದಾಗಿ ಮೊಬೈಲ್ ಫೋನ್ ಬ್ಯಾಟರಿಗಳ ತಯಾರಿಕೆಯಲ್ಲಿ ಬಳಸುವ 28 ವಸ್ತುಗಳು ಸುಂಕ ಮುಕ್ತವಾಗಲಿದ್ದು, ವಾಹನಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.
ಅಷ್ಟೇ ಅಲ್ಲ, ಈ ಬಾರಿಯ ಬಜೆಟ್‌ನಲ್ಲಿ ಕೋಬಾಲ್ಟ್, ಲಿಥಿಯಂ ಐಯಾನ್ ಬ್ಯಾಟರಿ ಸ್ಕ್ರ್ಯಾಪ್, ಸೀಸ ಸೇರಿದಂತೆ ಇತರ 12 ಖನಿಜಗಳಂತಹ ಅನೇಕ ಅಗತ್ಯ ವಸ್ತುಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು ತೆಗೆದುಹಾಕಲು ಭಾರತ ಸರ್ಕಾರ ಘೋಷಿಸಿದೆ. ಬ್ಯಾಟರಿಗಳು, ಸೆಮಿಕಂಡಕ್ಟರ್‌ಗಳು ಮತ್ತು ರಿನಿವೇಬಲ್ ಎನರ್ಜಿ ಎಕ್ಯೂಪ್ಮೆಂಟ್ ಶಕ್ತಿ ಉಪಕರಣಗಳನ್ನು ತಯಾರಿಸಲು ಈ ಎಲ್ಲಾ ವಸ್ತುಗಳನ್ನು ಬಳಸಲಾಗುತ್ತದೆ. ಇವುಗಳ ಮೇಲಿನ ಬೇಸಿಕ್ ಕಸ್ಟಮ್ ಡ್ಯೂಟಿ (ಬಿಸಿಡಿ) ತೆಗೆದ ನಂತರ ಎಲೆಕ್ಟ್ರಿಕ್ ವಾಹನಗಳ ಜೊತೆಗೆ, ಕ್ಲೀನ್ ಎನರ್ಜಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಉತ್ತೇಜನ ಸಿಗುತ್ತದೆ.
ಸರ್ಕಾರ ನಡೆಸುತ್ತಿರುವ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮತ್ತಷ್ಟು ಬಲಪಡಿಸಲು ರಾಷ್ಟ್ರೀಯ ಉತ್ಪಾದನಾ ಮಿಷನ್ ಅನ್ನು ಬಲಪಡಿಸುವ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರೊಂದಿಗೆ ಸ್ಟಾರ್ಟಪ್‌ಗಳಿಗೆ ನೀಡುವ ಸಾಲದ ಮಿತಿಯನ್ನು 10 ಕೋಟಿ ರೂಪಾಯಿಂದ 20 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. 27 ವಿವಿಧ ವಲಯಗಳ ಸ್ಟಾರ್ಟಪ್‌ಗಳಿಗೆ ಈ ನೆರವು ನೀಡಲಾಗುವುದು. ಇದರ ಪರಿಣಾಮ ಭಾರತೀಯ ಆಟೋಮೊಬೈಲ್ ಉದ್ಯಮದ ಮೇಲೆ ಗೋಚರಿಸಲಿದೆ.
ಓದಿ: ಕೇಂದ್ರ ಬಜೆಟ್ 2025 : ನ್ಯೂಕ್ಲಿಯರ್ ಎನರ್ಜಿ ಮಿಷನ್ನತ್ತ ಭಾರತದ ದಿಟ್ಟ ಹೆಜ್ಜೆ