ಮೈಸೂರು: 'ಈ ಬಾರಿಯ ಕೇಂದ್ರ ಬಜೆಟ್ ದೇಶದ ಹಿತದೃಷ್ಟಿಯಿಂದ, ಅದರಲ್ಲೂ ಕರ್ನಾಟಕದ ಹಿತದೃಷ್ಟಿಯಿಂದ, ದೂರದೃಷ್ಟಿಯಿಲ್ಲದ ನಿರಾಶದಾಯಕವಾಗಿದೆ. ಕರ್ನಾಟಕಕ್ಕೆ ಪ್ರತಿ ಬಾರಿಯಂತೆ ಈ ಸಲವೂ ಚೊಂಬನ್ನೇ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಅನ್ಯಾಯವಾಗಿದೆ. ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರ ಮುಂದೆ ಬೇಕಾದರೂ ಇದನ್ನೇ ಹೇಳುತ್ತೇನೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಅನ್ನು ಟೀಕಿಸಿದರು.
ಈ ಬಗ್ಗೆ ಮೈಸೂರಿನ ತಮ್ಮ ಮನೆಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕೇಂದ್ರ ಬಜೆಟ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬಜೆಟ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಪ್ರಮುಖ ಅಂಶಗಳು:
2024-25ರ ಬಜೆಟ್ 47,16000 ಕೋಟಿ ಆಗಿತ್ತು. ₹1,04,000 ಕೋಟಿ ತೆರಿಗೆ ಕಡಿಮೆ ಆಯ್ತು. ತೆರಿಗೆ ಅವರ ನಿರೀಕ್ಷೆಯಂತೆ ಸಂಗ್ರಹ ಆಗಿಲ್ಲ ಅಂತಲೇ ಅರ್ಥ. ಈ ಸಾಲಿನ 50,65,345 ಕೋಟಿ ಬಜೆಟ್ ಗಾತ್ರದಲ್ಲಿ ಸಾಲದ ಪ್ರಮಾಣವೇ 15,68,936 ಕೋಟಿಯಷ್ಟಿದೆ. ಇದರಲ್ಲಿ ಬಡ್ಡಿಗೇ 12,70000 ಕೋಟಿ ಹೋಗುತ್ತಿದೆ. ದೇಶದ ಸಾಲ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿವರೆಗೂ ಆಗಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದರು.
ಒಟ್ಟಾರೆ ಬಜೆಟ್ ಗಾತ್ರ 50,65,345 ಕೋಟಿ ರೂ.ಗಳು. 2024-25ನೇ ಸಾಲಿಗೆ ಸಂಬಂಧಿಸಿದಂತೆ 48.20 ಲಕ್ಷ ಕೋಟಿ ರೂ.ಗಳ ಬಜೆಟ್ಅನ್ನು ಮಂಡಿಸಿದ್ದರು. ಆದರೆ, ಪರಿಷ್ಕೃತ ಅಂದಾಜಿನ ಪ್ರಕಾರ 47.16 ಲಕ್ಷ ಕೋಟಿ ರೂಪಾಯಿಗಳಷ್ಟು ವೆಚ್ಚವಾಗಬಹುದು ಎಂದು ಅಂದಾಜಿಸಿದ್ದಾರೆ. ಅದರಂತೆ ಇದನ್ನು ನೋಡಿದರೆ ಕೇಂದ್ರ ಸರ್ಕಾರಕ್ಕೆ 1.04 ಲಕ್ಷ ಕೋಟಿ ರೂಪಾಯಿಗಳಷ್ಟು ತೆರಿಗೆ ಸಂಗ್ರಹ ಕಡಿಮೆಯಾಗುತ್ತದೆ ಎಂದು ಅಂದಾಜು ಮಾಡಿದ್ದಾರೆ. ಹಾಗಾಗಿ, ದೇಶದ ಆರ್ಥಿಕ ಸ್ಥಿತಿ ಸರಿಯಾಗಿಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದರು.
ಕೇಂದ್ರ ಸರ್ಕಾರದ 50.65 ಲಕ್ಷ ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ 15,68,936 ಕೋಟಿ ರೂಪಾಯಿಯಷ್ಟು ಸಾಲ ಇರಲಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ್ದಾರೆ. ಇದೂ ಸೇರಿದರೆ, ನನ್ನ ಅಂದಾಜಿನ ಪ್ರಕಾರ 2026ರ ಮಾರ್ಚ್ ವೇಳೆಗೆ ದೇಶದ ಸಾಲ 202ರಿಂದ 205 ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟಬಹುದು. ನಿರ್ಮಲಾ ಸೀತಾರಾಮನ್ ಅವರೇ ತಮ್ಮ ಬಜೆಟ್ ದಾಖಲೆಗಳಲ್ಲಿ ಹೇಳಿರುವಂತೆ, ಈ ವರ್ಷ ಬಡ್ಡಿ ಪಾವತಿಗಾಗಿ 12.7 ಲಕ್ಷ ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತದೆ. ಈ ಬಜೆಟ್‌ನಲ್ಲಿ ವಿತ್ತೀಯ ಕೊರತೆ ಶೇ.4.4ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ. ರೆವಿನ್ಯೂ ಕೊರತೆ ಶೇ.1.5ರಷ್ಟು ಇರಲಿದೆ ಎಂದು ಅಂದಾಜು ಮಾಡಿದ್ದಾರೆ ಎಂದು ಹೇಳಿದರು.
ಕರ್ನಾಟಕಕ್ಕೆ ಯಾವುದೇ ಹೊಸ ಘೋಷಣೆಯಿಲ್ಲ : ಮುಖ್ಯವಾಗಿ, ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯಕ್ಕೆ ಈ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಇಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ಆಂಧ್ರಪ್ರದೇಶ ಬಿಟ್ಟರೆ ಉಳಿದ ಯಾವ ರಾಜ್ಯಗಳಿಗೂ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹನ್ನೊಂದು ಬಜೆಟ್ಗಳನ್ನು ನೋಡುತ್ತಾ ಬಂದ ನಮಗೆ 12ನೇ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಇದು ಅವರೇ ಆಗಾಗ ಹೇಳಿಕೊಳ್ಳುತ್ತಿರುವ 'ವಿಕಸಿತ ಭಾರತ'ದ ಬಜೆಟ್ ಅಲ್ಲ 'ಅವನತ ಭಾರತ'ದ ಬಜೆಟ್. ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿದ್ದ ಭಾರತವನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದಕ್ಕೆ ಎಳೆದೊಯ್ಯುತ್ತಿದೆ. ಇದು ಯಥಾಪ್ರಕಾರ ಕರ್ನಾಟಕದ ಪಾಲಿಗೆ ಮಾತ್ರವಲ್ಲ ಇಡೀ ದೇಶಕ್ಕೆ ನಿರಾಶದಾಯಕ, ನಷ್ಟದಾಯಕ ಮತ್ತು ಹಾನಿಕಾರಕ ಬಜೆಟ್ ಎಂದು ಟೀಕಿಸಿದರು.
ಪ್ರಧಾನಿ ಮೋದಿಯವರು ನಮ್ಮದು ಒಕ್ಕೂಟ ವ್ಯವಸ್ಥೆಯ ಭಾರತ ಎನ್ನುವುದನ್ನು ಮರೆತೇ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಎಂದಾಕ್ಷಣ ಪ್ರತಿಯೊಂದು ರಾಜ್ಯದ ಜನತೆ ತಮ್ಮ ರಾಜ್ಯಕ್ಕೆ ಏನಾದರೂ ಕೊಡುಗೆಗಳಿರಬಹುದೇ ಎಂದು ಆಸೆಕಂಗಳಿಂದ ನೋಡುತ್ತಾರೆ. ಇಂದು ಮಂಡಿಸಿದ ಬಜೆಟ್‌ನಲ್ಲಿ ಒಂದೆಡೆ ಬಿಹಾರ, ಇನ್ನೊಂದೆಡೆ ಆಂಧ್ರಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳ ಪ್ರಸ್ತಾವವೂ ಇಲ್ಲ, ಆ ರಾಜ್ಯಗಳಿಗೆ ಸಂಬಂಧಿಸಿದ ಯೋಜನೆಗಳೂ ಇಲ್ಲ ಎಂದು ಸಿಎಂ ಹೇಳಿದರು.
ಕರ್ನಾಟಕದ ವಿರುದ್ದ ಪ್ರಧಾನಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ : ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕದ ಜನತೆ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವಿವರವಾದ ಬೇಡಿಕೆಯ ಪಟ್ಟಿಯನ್ನು ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದ್ದೆ. ಬಹುಶಃ ಆ ಬೇಡಿಕೆಯ ಪಟ್ಟಿಯನ್ನು ಅವರು ಕಣ್ಣೆತ್ತಿ ಕೂಡ ನೋಡಿದ ಹಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಬಿಜೆಪಿ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ರಾಜ್ಯದ ಜನ ಬಿಜೆಪಿಯನ್ನು ಗೆಲ್ಲಿಸದಿದ್ದರೆ ನರೇಂದ್ರ ಮೋದಿ ಆಶೀರ್ವಾದ ನಿಮಗೆ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಕರ್ನಾಟಕದ ಸ್ವಾಭಿಮಾನಿ ಜನತೆ ಆ ಬೆದರಿಕಗೆ ಜಗ್ಗದೆ ಬಿಜೆಪಿಯನ್ನು ಸೋಲಿಸಿದ್ದರು. ಅದರಂತೆ ನರೇಂದ್ರ ಮೋದಿಯವರು ಕರ್ನಾಟಕದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು.
ಇದನ್ನೂ ಓದಿ: ಕೇಂದ್ರ ಬಜೆಟ್ 2025 ಪ್ರಮುಖ ಘೋಷಣೆಗಳು ಹೀಗಿವೆ
ಕರ್ನಾಟಕದಲ್ಲಿ ಇರುವವರೆಲ್ಲರೂ ಪಕ್ಷದ ಮತದಾರರಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ 46% ಜನ ಬಿಜೆಪಿ ಪಕ್ಷಕ್ಕೂ ಮತ ಚಲಾಯಿಸಿದ್ದಾರೆ. ನರೇಂದ್ರ ಮೋದಿಯವರು ಕರ್ನಾಟಕದ ವಿರುದ್ಧ ಸೇಡು ತೀರಿಸಿಕೊಳ್ಳುವ ಭರದಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕಿದವರ ವಿರುದ್ಧವೂ ಸೇಡು ತೀರಿಸಿಕೊಳ್ಳುತ್ತಿದ್ದಾರೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಕಾರಣದಿಂದಾಗಿ ತೆರಿಗೆ ಹಂಚಿಕೆಯಲ್ಲಿ ನಮಗಾಗಿರುವ ಅನ್ಯಾಯ, ಜಿಎಸ್ಟಿ ಪರಿಹಾರದಲ್ಲಿನ ಮೋಸ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಿಗದ ಪರಿಹಾರ, ನಮ್ಮ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮಹದಾಯಿ, ಭದ್ರಾ ಮೇಲ್ದಂಡೆ ಮತ್ತು ಮೇಕೆದಾಟುವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಬೇಕಾದ ಅಂಗೀಕಾರ ಮತ್ತು ಆರ್ಥಿಕ ನೆರವು, ಬೆಂಗಳೂರು ಮಹಾನಗರದ ಮೂಲಸೌಕರ್ಯಕ್ಕೆ ನೆರವು, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹೆಚ್ಚಿಸಬೇಕಾಗಿರುವ ಕೇಂದ್ರ ಸರ್ಕಾರದ ಪಾಲಿನ ಪ್ರಮಾಣ ಹೀಗೆ ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೆವು. ಇವುಗಳಲ್ಲಿ ಯಾವುದೇ ಒಂದು ಅಂಶದ ಬಗ್ಗೆಯೂ ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ಬೇಸರ ಹೊರಹಾಕಿದರು.
ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಪ್ರಕಾರವೇ ನೀಡಬೇಕಿರುವ ರೂ. 5,495 ಕೋಟಿ ಹಣವನ್ನು ನೀಡುವ ಸುಳಿವು ಕೂಡ ಇಲ್ಲ. ತೆರಿಗೆ ಹೆಚ್ಚು ನೀಡುವ ರಾಜ್ಯಗಳ ಅಭಿವೃದ್ಧಿಗೆ ಅನುದಾನವನ್ನು ಹೆಚ್ಚಿಸುವ ಬಗ್ಗೆ ತುಟಿ ಬಿಚ್ಚಿಲ್ಲ. ಅಂಗನವಾಡಿ ಮತ್ತು ಆಶಾಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ರೂ.5,000ಕ್ಕೆ ಮತ್ತು ಅಡುಗೆ ಕೆಲಸಗಾರರು ಮತ್ತು ಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ಕನಿಷ್ಠ ರೂ.5,000 ಹೆಚ್ಚಿಸಬೇಕು ಎಂಬ ನಮ್ಮ ಬೇಡಿಕೆಯನ್ನು ಪುರಸ್ಕರಿಸಿಲ್ಲ ಎಂದರು.
ಇದೇ ವೇಳೆ, ''ನಾನು ಬೆಂಗಳೂರಿನಿಂದ ಬರುವಾಗ ಬಿ.ಆರ್.ಪಾಟೀಲ್ ಅವರ ರಾಜೀನಾಮೆ ಪತ್ರ ಬಂತು. ಅದು ಲಕೋಟೆಯಲ್ಲಿ ಇದೆ, ಇನ್ನೂ ಓದಿಲ್ಲ. ಅವರನ್ನು ಕರೆದು ಮಾತನಾಡುತ್ತೇನೆ'' ಎಂದು ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ಶಾಸಕ ಬಿ.ಆರ್.ಪಾಟೀಲ್ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಇದು ಜನತಾ ಜನಾರ್ದನ ಬಜೆಟ್ ಎಂದ ಪ್ರಧಾನಿ ನರೇಂದ್ರ ಮೋದಿ