ಬೆಂಗಳೂರು : ಪ್ರವಾಸ ಅಥವಾ ಮದುವೆ ಅಂತಾ ಏನಾದರೂ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಹೊರಗೆ ಹೋಗುತ್ತಿದ್ದೀರಾ? ಹಾಗಾದರೆ ಹೊರಡುವ ಮುನ್ನ ಮನೆಗೆ ಬೀಗ ಹಾಕಿದ ಫೋಟೋ ಹಾಗೂ ವಿಳಾಸ ಕೊಟ್ಟು ಪೊಲೀಸರಿಗೆ ಮಾಹಿತಿ ನೀಡಿ. ನೀವು ಬರುವ ತನಕವೂ ಖದೀಮರಿಂದ ನಿಮ್ಮ ಮನೆ ಕಳ್ಳತನವಾಗದ ಹಾಗೆ ಗಸ್ತು ಕಾಯಲಿದ್ದಾರೆ.
ಹೌದು, ಕೆಲಸದ ಸಲುವಾಗಿ ಹೊರಗೆ ಹೋದಾಗ ನಿಮ್ಮ ಅನುಪಸ್ಥಿತಿಯಲ್ಲಿ ಮನೆಗಳ್ಳತನವಾಗುವ ಭಯವಿದ್ದರೆ ಬಿಟ್ಟುಬಿಡಿ. ಏಕೆಂದರೆ ನಗರದ ದಕ್ಷಿಣ ವಿಭಾಗದ ಪೊಲೀಸರ ವತಿಯಿಂದ ಲಾಕಿಂಗ್ ಹೌಸ್ ಚೆಕ್ಕಿಂಗ್ ಸಿಸ್ಟಮ್ ಎಂಬ ವಿನೂತನ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ದಿನೇ ದಿನೇ ರಾತ್ರಿ ಹಾಗೂ ಹಗಲು ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬೀಗ ಹಾಕಿದ ಮನೆಯನ್ನ ಗುರಿಯಾಗಿಸಿಕೊಳ್ಳುವ ಚೋರರು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಾಣ್ಯ ದೋಚುತ್ತಿದ್ದಾರೆ. ಹೀಗಾಗಿ, ಮನೆಗಳ್ಳತನ ಪ್ರಕರಣ ನಿಯಂತ್ರಿಸಲು ಹಾಗೂ ಗಸ್ತು ವ್ಯವಸ್ಥೆಯನ್ನ ಪ್ರಭಾವಶಾಲಿಯಾಗಿಸಲು ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ.
ಬಸವನಗುಡಿ, ವಿವಿಪುರಂ, ಬನಶಂಕರಿ, ಜಯನಗರ, ಕುಮಾರಸ್ವಾಮಿ ಲೇಔಟ್, ಕೋಣನಕುಂಟೆ ಸೇರಿದಂತೆ 18 ಪೊಲೀಸ್ ಠಾಣೆಗಳು ನಗರ ದಕ್ಷಿಣ ವಿಭಾಗದ ವ್ಯಾಪ್ತಿಗೆ ಬರಲಿದೆ. ಸುಮಾರು 1300 ಮಂದಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ದಾಖಲಾಗುವ ಮನೆಗಳ್ಳತನ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಡಿಸಿಪಿ ಲೋಕೇಶ್ ಜಗಲಾಸರ್ ಅವರ ನೇತೃತ್ವದಲ್ಲಿ ಲಾಕಿಂಗ್ ಹೌಸ್ ಚೆಕ್ಕಿಂಗ್ ಸಿಸ್ಟಮ್ ಜಾರಿಗೆ ಬರುತ್ತಿದೆ.
ಏನಿದು ಹೊಸ ಯೋಜನೆ ? ಮದುವೆ, ಸಮಾರಂಭ ಅಥವಾ ಪ್ರವಾಸ ಸೇರಿದಂತೆ ವಿವಿಧ ಕಾರಣಗಳಿಗಾಗಿ ಒಂದು ದಿನಕ್ಕಿಂತ ಮೇಲಾಗಿ ಬೀಗ ಹಾಕಿ ಹೊರಗೆ ಹೋಗುವವರು ಈ ಯೋಜನೆಯನ್ನ ಬಳಸಿಕೊಳ್ಳಬಹುದಾಗಿದೆ. ಮನೆಗೆ ಬೀಗ ಹಾಕಿದ ಫೋಟೋ, ಮನೆ ವಿಳಾಸವನ್ನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕಿದೆ. ಅಲ್ಲದೆ, ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮಾಹಿತಿ ನೀಡಬೇಕಿದೆ. ಈ ಕುರಿತು ಮಾಹಿತಿ ಕ್ರೋಢೀಕರಿಸುವ ಆಯಾ ಠಾಣೆಗಳಿಗೆ ಸಂಬಂಧಿಸಿದ ಪೊಲೀಸರು ನೈಟ್ ಬಿಟ್ ಸಿಬ್ಬಂದಿಗೆ, ಇನ್ಸ್ಪೆಕ್ಟರ್ಗಳಿಗೆ ಮಾಹಿತಿ ನೀಡುತ್ತಾರೆ. ದೂರುಗಳ ಸಂಖ್ಯೆಗೆ ಅನುಸಾರವಾಗಿ ಹೆಚ್ಚಿನ ಗಸ್ತು ತಿರುಗಿ ನಿಮ್ಮ ಮನೆ ಮೇಲೆ ನಿಗಾವಹಿಸಲು ಪೊಲೀಸ್ ಸಿಬ್ಬಂದಿಗೆ ನೆರವಾಗಲಿದೆ. ಈ ಮೂಲಕ ಮನೆಗಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲು ಸಹಕಾರಿಯಾಗಲಿದೆ.
ಈ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಮಾತನಾಡಿ, ಮನೆಗಳ್ಳತನ ಕೃತ್ಯಗಳನ್ನು ತಡೆಯಲು ಹಾಗೂ ಪೊಲೀಸ್ ಬೀಟ್ ವ್ಯವಸ್ಥೆಯನ್ನ ಇನ್ನಷ್ಟು ಗಟ್ಟಿಗೊಳಿಸಲು ಲಾಕಿಂಗ್ ಹೌಸ್ ಚೆಕ್ಕಿಂಗ್ ಸಿಸ್ಟಮ್ ಜಾರಿಗೆ ತರಲಾಗುತ್ತಿದೆ. ಪ್ರವಾಸ, ಸಮಾರಂಭ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಕುಟುಂಬ ಸಮೇತ ಮನೆಯಿಂದ ಹೋಗುವವರು ಮನೆಗೆ ಹಾಕಿದ ಭಾವಚಿತ್ರ ಹಾಗೂ ವಿಳಾಸ ನೀಡಿದರೆ ಆಯಾ ಏರಿಯಾಗಳಲ್ಲಿ ಆದ್ಯತೆ ಮೇರೆಗೆ ನಮ್ಮ ಸಿಬ್ಬಂದಿ ಗಸ್ತು ಕಾಯಲಿದ್ದಾರೆ ಎಂದು ಹೇಳಿದ್ದಾರೆ.
ಭಾವಚಿತ್ರ ಹಾಗೂ ಮನೆ ವಿಳಾಸ ನೀಡಬೇಕಾದ ವಾಟ್ಸಾಪ್ ಸಂಖ್ಯೆ : 9480801500, ದಕ್ಷಿಣ ವಿಭಾಗದ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ: 08022943111