ಗಂಗಾವತಿ (ಕೊಪ್ಪಳ): ಸಿದ್ದರಾಮಯ್ಯ ಅವರ ಸರ್ಕಾರದಲ್ಲಿರುವ ಪ್ರಭಾವಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ನಟಿಸುತ್ತಿರುವ ಚಿತ್ರದ ಚಿತ್ರೀಕರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬ್ರೇಕ್ ಹಾಕಿರುವ ಘಟನೆ ತಾಲ್ಲೂಕಿನ ಸಣಾಪುರ ಹೊರವಲಯದಲ್ಲಿ ನಡೆದಿದೆ.
ಸಚಿವ ಜಮೀರ್ ಪುತ್ರ ಜೈದ್ ಅಹ್ಮದ್ ಖಾನ್ ನಟಿಸುತ್ತಿರುವ ಕಲ್ಟ್ ಚಿತ್ರದ ಚಿತ್ರೀಕರಣ ಆನೆಗೊಂದಿ, ಸಣಾಪುರ, ವಿರುಪಾಪಪುರಗಡ್ಡೆ ಭಾಗದಲ್ಲಿ ನಡೆಯುತ್ತಿದೆ. ಸಣಾಪುರ ಭಾಗದಲ್ಲಿರುವ ತುಂಗಭದ್ರಾ ನದಿ ಪಕ್ಕದಲ್ಲಿ ಶೂಟಿಂಗ್ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಶೂಟಿಂಗ್ ವೇಳೆ ಅರಣ್ಯಕ್ಕೆ ಬೆಂಕಿ ಬಿದ್ದಿರುವ ಸನ್ನಿವೇಶ ನಿರ್ಮಾಣ ಮಾಡಿ ಚಿತ್ರೀಕರಣ ಮಾಡುತ್ತಿರುವ ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಚಿತ್ರೀಕರಣ ಪ್ಯಾಕಪ್ ಮಾಡುವಂತೆ ಸೂಚನೆ ನೀಡಿದ್ದಾರೆ.
ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಶೂಟಿಂಗ್ ಮಾಡಿರುವ ಆರೋಪ ಚಿತ್ರ ತಂಡದ ಮೇಲಿದೆ. ಅಲ್ಲದೇ ತುಂಗಭದ್ರಾ ನದಿ ಪಾತ್ರದಲ್ಲಿ ಅತ್ಯಂತ ಸೂಕ್ಷ್ಮ ಜಲಚರ, ಪ್ರಾಣಿ, ಪಕ್ಷಿಗಳ ಆವಾಸ ಸ್ಥಾನವಾಗಿದ್ದು, ಇಲ್ಲಿ ಶೂಟಿಂಗ್ ಮಾಡಲು ಅವಕಾಶ ಇಲ್ಲ. ಚಿತ್ರೀಕರಣದ ಉದ್ದೇಶಕ್ಕೆ ಬೆಂಕಿ ಹಚ್ಚಿ ಪರಿಸರದ ಮೇಲೆ ಪರಿಣಾಮ ಬೀರಿರುವುದರಿಂದ ಅಪರೂಪದ ಸಸ್ಯ ಪ್ರಭೇದ, ಪಕ್ಷಿ, ಪ್ರಾಣಿ ಸಂಕುಲಕ್ಕೆ ಚಿತ್ರತಂಡದವರು ಅಪಾಯ ತಂದೊಡಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ.
ಜೈದ್, ರಚಿತಾ ಭಾಗಿ : ಕಳೆದ ಎರಡು ದಿನಗಳಿಂದ ಸಾಣಾಪುರ, ವಿರುಪಾಪುರಗಡ್ಡೆ, ರಂಗಾಪುರ ಸೇರಿದಂತೆ ಐತಿಹಾಸಿಕ ಪ್ರದೇಶಗಳಲ್ಲಿ ಚಿತ್ರೀಕರಣಕ್ಕಾಗಿ ತಂಡ ಆಗಮಿಸಿತ್ತು. ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಪುತ್ರ ಜೈದ್ ಖಾನ್ ಈ ಚಿತ್ರದ ಪ್ರಮುಖ ನಟ. ನಾಯಕಿಯಾಗಿ ರಚಿತಾ ರಾಮ್ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ನಟರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ವಿರೂಪಾಪುರ ಗಡ್ಡೆಯ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಮುಂದಾದಾಗ ಅರಣ್ಯ ಇಲಾಖೆಯವರು ಆಕ್ಷೇಪ ವ್ಯಕ್ತಪಡಿಸಿ ವಾಪಸ್ ಕಳಿಸಿದ್ದಾರೆ. ನದಿ ತೀರ ಮತ್ತು ಅರಣ್ಯ ಪ್ರದೇಶದಲ್ಲಿ ಬೆಂಕಿ ಹಾಕಿ ಚಿತ್ರೀಕರಣ ನಡೆಸಿದ್ದರು. ಯಾವುದೇ ಪರವಾನಗಿ ಇಲ್ಲದೇ ಚಿತ್ರೀಕರಣ ಮಾಡುತ್ತಿದ್ದರಿಂದ ನಟರು ಸೇರಿದಂತೆ ಚಿತ್ರ ತಂಡವನ್ನು ವಾಪಸ್ ಕಳಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಮಕ್ಕೆ ಇಲಾಖೆ ಹಿಂದೇಟು : ಯಾವುದೇ ಅನುಮತಿ ಪಡೆಯದೇ ಅರಣ್ಯ ಇಲಾಖೆಯ ಪ್ರದೇಶದಲ್ಲಿ ಅದೂ ಅತ್ಯಂತ ಸೂಕ್ಷ್ಮ ಪರಿಸರ ಎಂದು ಗುರುತಿಸಿಕೊಂಡಿರುವ ತುಂಗಭದ್ರಾ ನದಿ ಪಾತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಚಿತ್ರತಂಡ ಬೆಂಕಿ ಹಾಕಿ ಚಿತ್ರೀಕರಣ ಮಾಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಚಿತ್ರ ತಂಡವನ್ನು ವಾಪಸ್ ಕಳಿಸಿದ್ದಾರೆ.
ಇದನ್ನೂ ಓದಿ: ತಂದೆ ನಿರ್ಮಾಪಕನಾದ್ರೂ ಸ್ವಪ್ರಯತ್ನದಲ್ಲೇ ಸಾಧನೆ : 500ರೂ.ಗೆ ಕೆಲಸ ಮಾಡಿದ್ದ ನಟ ಕನ್ನಡದ ಸೂಪರ್ ಸ್ಟಾರ್