PM Modi Inaugurates BMGE 2025: ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಭಾರತದ ವಾಹನ ಉದ್ಯಮವು ಅದ್ಭುತವಾಗಿದೆ ಮತ್ತು ಭವಿಷ್ಯಕ್ಕೂ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಎಚ್‌ಡಿ ಕುಮಾರಸ್ವಾಮಿ, ಜಿತನ್ ರಾಮ್ ಮಾಂಝಿ, ಮನೋಹರ್ ಲಾಲ್, ಪಿಯೂಷ್ ಗೋಯಲ್ ಮತ್ತು ಹರ್ದೀಪ್ ಸಿಂಗ್ ಪುರಿ ಮತ್ತು ಆಟೋಮೊಬೈಲ್ ವಲಯದ ನಾಯಕರು ಉದ್ಘಾಟನೆ ವೇಳೆ ಸಾಥ್ ನೀಡಿದರು.
ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು, ಭಾರತ ಇಂದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾದಾಗ ಭಾರತದ ವಾಹನ ಮಾರುಕಟ್ಟೆ ಎಲ್ಲಿರುತ್ತದೆ ಎಂದು ಊಹಿಸಿ. ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣವು ಮೊಬಿಲಿಟಿ ಕ್ಷೇತ್ರದ ಅಭೂತಪೂರ್ವ ವಿಸ್ತರಣೆಯ ಪ್ರಯಾಣವೂ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಾನು ಕೊನೆಯ ಬಾರಿ ನಿಮ್ಮೊಂದಿಗೆ ಬಂದಾಗ ಲೋಕಸಭಾ ಚುನಾವಣೆಗಳು ದೂರವಿರಲಿಲ್ಲ. ಆ ಸಮಯದಲ್ಲಿ ನಿಮ್ಮೆಲ್ಲರ ವಿಶ್ವಾಸದಿಂದಾಗಿ ಮುಂದಿನ ಬಾರಿಯೂ ನಾನು ಖಂಡಿತವಾಗಿಯೂ 'ಭಾರತ್ ಮೊಬಿಲಿಟಿ ಎಕ್ಸ್‌ಪೋ'ಗೆ ಬರುತ್ತೇನೆ ಎಂದು ಹೇಳಿದ್ದೆ. ದೇಶವು ನಮಗೆ ಮೂರನೇ ಬಾರಿಗೆ ಆಶೀರ್ವದಿಸಿತು. ನೀವೆಲ್ಲರೂ ನನ್ನನ್ನು ಇಲ್ಲಿಗೆ ಕರೆದಿದ್ದೀರಿ. ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈ ವರ್ಷ ಇಂಡಿಯಾ ಮೊಬಿಲಿಟಿ ಎಕ್ಸ್‌ಪೋದ ವ್ಯಾಪ್ತಿ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದರು.
ಮುಂದಿನ 5-6 ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ. ಇಲ್ಲಿ ಅನೇಕ ಹೊಸ ವಾಹನಗಳು ಕೂಡ ಬಿಡುಗಡೆಯಾಗಲಿವೆ. ಇದು ಭಾರತದಲ್ಲಿ ಚಲನಶೀಲತೆಯ ಭವಿಷ್ಯದ ಬಗ್ಗೆ ಎಷ್ಟು ಸಕಾರಾತ್ಮಕತೆ ಇದೆ ಎಂಬುದನ್ನು ತೋರಿಸುತ್ತದೆ. ಇಂದಿನ ಭಾರತವು ಆಕಾಂಕ್ಷೆಗಳಿಂದ ತುಂಬಿದೆ, ಯುವಕರು ಶಕ್ತಿಯಿಂದ ತುಂಬಿದ್ದಾರೆ ಎಂದು ಪ್ರಧಾನಿ ಹೇಳಿದರು.