TRAI New Rules:ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಿಮ್ಗೆ ಸಂಬಂಧಿಸಿದ ಸುದ್ದಿಯೊಂದು ಸಂಚಲನ ಮೂಡಿಸಿತ್ತು. ಮೊಬೈಲ್ ಬಳಕೆದಾರರು ಕೇವಲ 20 ರೂಪಾಯಿಗಳಿಗೆ ತಮ್ಮ ಸಿಮ್ ಅನ್ನು 4 ತಿಂಗಳವರೆಗೆ ಸಕ್ರಿಯವಾಗಿರಿಸಿಕೊಳ್ಳಬಹುದು ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಜನರು ಸಹ ಇದರ ಬಗ್ಗೆ ಹಿಂದೆ-ಮುಂದೆ ತಿಳಿಯದೇ ನಂಬಿದ್ದರು. ಆದರೆ ಸದ್ಯ ಈ ವರದಿಗಳನ್ನು ಟ್ರಾಯ್ ಮತ್ತು ಪಿಐಬಿ ನಿರಾಕರಿಸಿವೆ. ಆ ಕುರಿತು ಸುದ್ದಿಯೊಂದು ಇಲ್ಲಿದೆ..
ಟ್ರಾಯ್ ಮತ್ತು ಪಿಐಬಿ ಹೇಳಿದ್ದು ಹೀಗೆ: ಹೌದು, 20 ರೂಪಾಯಿ ರೀಚಾರ್ಜ್ ಮಾಡಿದ್ರೆ ನಿಮ್ಮ ಸಿಮ್ ಮುಂದಿನ ನಾಲ್ಕು ತಿಂಗಳವರೆಗೆ ಸಕ್ರಿಯವಾಗಿರುತ್ತದೆ ಎಂಬ ನಿಯಮವಿಲ್ಲ ಎಂದು ಟ್ರಾಯ್ ಮತ್ತು ಪಿಐಬಿ ತಿಳಿಸಿವೆ. ಅಗತ್ಯವಿರುವ ಗ್ರಾಹಕರಿಗೆ ವಾಯ್ಸ್ ಕಾಲ್ಸ್ ಮತ್ತು ಎಸ್ಎಮ್ಎಸ್ವುಳ್ಳ ರೀಚಾರ್ಜ್ ಪ್ಲಾನ್ಗಳನ್ನು ತರಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಲಾಗಿದೆ. ಅಂದರೆ ಡೇಟಾ ಪ್ಲಾನ್ ಅಗತ್ಯವಿಲ್ಲದ ಗ್ರಾಹಕರು ವಾಯ್ಸ್ ಕಾಲ್ಸ್ ಮತ್ತು ಎಸ್ಎಮ್ಎಸ್ ಪ್ಲಾನ್ಗಳನ್ನು ಮಾತ್ರ ಪಡೆಯಲಿದ್ದಾರೆ ಎಂದು ಟ್ರಾಯ್ ಹೇಳಿದೆ.
ನಿಮ್ಮ ಸಿಮ್ 20 ರೂ.ಗೆ 4 ತಿಂಗಳು ಆ್ಯಕ್ಟಿವ್: ಪ್ರಿಪೇಯ್ಡ್ ಮೊಬೈಲ್ ಬಳಕೆದಾರರಿಗೆ ಪರಿಹಾರ ಒದಗಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳು ಹಬ್ಬಿದ್ದವು. ಆ ಹಬ್ಬಿದ ಸುದ್ದಿಯಲ್ಲಿ ಜಿಯೋ, ಬಿಎಸ್ಎನ್ಎಲ್, ಏರ್ಟೆಲ್ ಮತ್ತು ವೋಡಾಫೋನ್-ಐಡಿಯಾನಂತಹ ಎಲ್ಲಾ ಟೆಲಿಕಾಂ ಆಪರೇಟರ್‌ಗಳ ಗ್ರಾಹಕರು ಕನಿಷ್ಠ 20 ರೂ.ಗಳ ರೀಚಾರ್ಜ್‌ನೊಂದಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ನಾಲ್ಕು ತಿಂಗಳವರೆಗೆ ಸಕ್ರಿಯವಾಗಿರಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನಲಾಗಿತ್ತು.