RE SCRAM 411 DISCONTINUED: ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ಒಂದು ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇತ್ತೀಚೆಗೆ ದೇಶಿಯ ಮಾರುಕಟ್ಟೆಗೆ ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 440ನ್ನು ಪರಿಚಯಿಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ.
ಹೌದು, ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ತನ್ನ ಸ್ಕ್ರ್ಯಾಮ್ 411 ಮಾಡೆಲ್ನ ಮಾರಾಟವನ್ನು ನಿಲ್ಲಿಸಿದೆ. ಅಷ್ಟೇ ಅಲ್ಲ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಈ ಮೋಟಾರ್‌ಸೈಕಲ್ ಕುರಿತು ಮಾಹಿತಿಯನ್ನು ಸಹ ತೆಗೆದುಹಾಕಿದೆ. ಇದರ ಮೂಲಕ ಇದು ತನ್ನ ಬೈಕ್‌ನ ಮಾರಾಟವನ್ನು ನಿಲ್ಲಿಸಿರುವುದರ ಬಗ್ಗೆ ಸೂಚಿಸುತ್ತದೆ. ಕಂಪನಿಯು ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 440 ಅನ್ನು ಬಿಡುಗಡೆ ಮಾಡಿದ್ದು, ಇದರ ಆರಂಭಿಕ ಬೆಲೆ ರೂ. 2.08 ಲಕ್ಷ (ಎಕ್ಸ್ ಶೋ ರೂಂ) ಆಗಿದೆ.
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ಡಿಸೈನ್: ಸ್ಕ್ರ್ಯಾಮ್ 411 ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 411 ಅನ್ನು ಆಧರಿಸಿದೆ. ಇದು ಚಿಕ್ಕದಾದ, ವೈರ್-ಸ್ಪೋಕ್ ವ್ಹೀಲ್ಗಳೊಂದಿಗೆ ಅಳವಡಿಸಲ್ಪಟ್ಟಿದೆ. ಇದು ಹಿಮಾಲಯನ್ ಎಂಜಿನ್ ಹೊಂದಿದೆ. ಈ ಬೈಕ್ ಅದರ ಪೂರ್ಣ ಪ್ರಮಾಣದ ADV ಆವೃತ್ತಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ ಬಾಡಿ ವರ್ಕ್ ಮತ್ತು ತೂಕವನ್ನು ಹೊಂದಿದೆ. ಈ ಬೈಕ್ ನಗರ ಸವಾರಿ ಮತ್ತು ಕೆಲವು ಆಫ್-ರೋಡ್ ಹಾದಿಗಳಿಗೆ ಸಹ ಚಲಿಸಲು ಸೂಕ್ತವಾಗಿತ್ತು.
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ರ ಪವರ್‌ಟ್ರೇನ್: ಸ್ಕ್ರ್ಯಾಮ್ 411 ರ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 411 ಸಿಸಿ ಎಂಜಿನ್ ಹೊಂದಿದ್ದು, ಇದು 6,500 ಆರ್‌ಪಿಎಂನಲ್ಲಿ 24.3 ಬಿಎಚ್‌ಪಿ ಪವರ್ ಮತ್ತು 4,250 ಆರ್‌ಪಿಎಂನಲ್ಲಿ 32 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಆದರೆ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುವಾಗ ಆರನೇ ಗೇರ್ನ ಕೊರತೆ ಕಂಡು ಬಂದಿತು.
ಸಮಸ್ಯೆ ಬಗೆಹರಿಸಿದ ಕಂಪನಿ: ಕಂಪನಿಯು ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 440 ನೊಂದಿಗೆ ಅದರ ದೊಡ್ಡ ಎಂಜಿನ್, ಹೆಚ್ಚಿನ ಪವರ್ ಮತ್ತು ಸಿಕ್ಸ್-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಈ ಸಮಸ್ಯೆಯನ್ನು ಬಗೆಹರಿಸಿತು. ಸ್ಕ್ರ್ಯಾಮ್ 440 ಟ್ಯೂಬ್-ಟೈಪ್ ಟೈರ್‌ಗಳೊಂದಿಗೆ ವೈರ್-ಸ್ಪೋಕ್ ರಿಮ್‌ಗಳು ಅಥವಾ ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಅಲಾಯ್ ವ್ಹೀಲ್‌ಗಳ ಆಯ್ಕೆಯನ್ನು ಸಹ ಹೊಂದಿದೆ.
ಇದರ ಬೆಲೆ ಎಷ್ಟು?: ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 440 ಬೆಲೆಯನ್ನು ಪರಿಗಣಿಸಿದರೆ, ಇದು ಸ್ಕ್ರ್ಯಾಮ್ 411 ಗಿಂತ ಕೇವಲ 2,000 ರೂ. ಹೆಚ್ಚಾಗಿದೆ. ಆದ್ದರಿಂದ ರಾಯಲ್ ಎನ್‌ಫೀಲ್ಡ್ ಅಂತಿಮವಾಗಿ ಸ್ಕ್ರ್ಯಾಮ್ 411 ಅನ್ನು ಬಂದ್ ಮಾಡಿ ಮಾರುಕಟ್ಟೆಯಲ್ಲಿ ಸ್ಕ್ರ್ಯಾಮ್ 440 ಅನ್ನು ಬಿಡುಗಡೆ ಮಾಡಿರುವುದು ಅರ್ಥಪೂರ್ಣವಾಗಿದೆ.
ಓದಿ: ಜನರ ಬೇಟೆಯಾಡುತ್ತಿದೆ ರಾಯಲ್ ಎನ್‌ಫೀಲ್ಡ್ ಹಂಟರ್ 350: ಕೇವಲ ಮೂರು ವರ್ಷಗಳಲ್ಲಿ ಲಕ್ಷಗಟ್ಟಲೇ ಬೈಕ್ ಸೇಲ್!