ಥಾಣೆ (ಮಹಾರಾಷ್ಟ್ರ) : ಎರಡು ವರ್ಷದ ಮಗುವೊಂದು 13 ನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಬಿದ್ದು ಪವಾಡಸದೃಶ ಬದುಕುಳಿದ ಘಟನೆ ಮಹಾರಾಷ್ಟ್ರದ ಥಾಣೆಯ ಜಿಲ್ಲೆಯ ಡೊಂಬಿವಲಿಯಲ್ಲಿ ಇತ್ತೀಚೆಗೆ ನಡೆದಿದೆ.
ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಮಗು ಅಚಾನಕ್ಕಾಗಿ ಆಗಿ ಅಲ್ಲಿಂದ ಬಿದ್ದಿದೆ. ಇದೇ ವೇಳೆ ಅದೇ ಕಟ್ಟಡದಿಂದ ಹೊರಬರುತ್ತಿದ್ದ ವ್ಯಕ್ತಿಯೊಬ್ಬರು ಮಗು ಬೀಳುವುದನ್ನು ಕಂಡು ತಕ್ಷಣವೇ ರಕ್ಷಣೆ ಧಾವಿಸಿದ್ದಾರೆ. ಮಗು ವ್ಯಕ್ತಿಯ ಕೈಯಿಂದ ಜಾರಿ ನೆಲಕ್ಕೆ ಅಪ್ಪಳಿಸಿದೆ. ಆದಾಗ್ಯೂ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಮರುಜನ್ಮ ಪಡೆದಿದೆ.
ಪ್ರತ್ಯಕ್ಷದರ್ಶಿಗಳು ಹೇಳೋದೇನು? ಮಗು ಕಟ್ಟಡದ 13ನೇ ಮಹಡಿಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಅಲ್ಲಿಂದ ಜಾರಿ ಬಿದ್ದಿತು. ಭವೇಶ ಮಹಾತ್ರೆ ಅವರು ಕೆಳ ಭಾಗದಿಂದ ಮಗು ಬೀಳುವ ಶಬ್ಧ ಕೇಳಿ ಓಡಿ ಹೋಗಿ ರಕ್ಷಿಸಲು ಮುಂದಾದರು. ಅದೃಷ್ಟವಶಾತ್ ಮಗು ನೇರವಾಗಿ ನೆಲಕ್ಕೆ ಬೀಳಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವ್ಯಕ್ತಿಯ ಸಾಹಸಕ್ಕೆ ಮೆಚ್ಚುಗೆ : ಮಗು ಬೀಳುವುದನ್ನು ಕ್ಷಣಾರ್ಧದಲ್ಲಿ ಅರಿತು ಹಿಡಿಯಲು ಧಾವಿಸಿದ ಭವೇಶ್ ಮಹಾತ್ರೆ ಅವರ ಸಾಹಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೂಡ ವ್ಯಕ್ತಿಗೆ ಶಹಬ್ಬಾಸ್ ಎಂದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ಮಹಾತ್ರೆ ಅವರ ತಕ್ಷಣದ ಪ್ರತಿಕ್ರಿಯೆಯಿಂದ ಮಗು ಬಚಾವಾಗಿದೆ. ಮಗುವಿಗೆ ಸಣ್ಣಪುಟ್ಟ ಗಾಯವಾಗಿವೆ. ಆದರೆ, ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಹಾತ್ರೆ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ: ದೆಹಲಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಗಮನಸೆಳೆದ ಕರ್ನಾಟಕದ 'ಲಕ್ಕುಂಡಿ' ಸ್ತಬ್ಧಚಿತ್ರ