ಮೈಸೂರು: ಕೃಷಿ ಹೊಂಡಕ್ಕೆ ಎಸೆದಿದ್ದ ನವಜಾತ ಶಿಶುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೇ ಅಸುನೀಗಿರುವ ಘಟನೆ ಮೈಸೂರು ತಾಲೂಕಿನ ಸಾಹುಕಾರ್ ಹುಂಡಿಯಲ್ಲಿ ನಡೆದಿದೆ.
ನಿನ್ನೆ (ಭಾನುವಾರ) ನವಜಾತ ಶಿಶುವನ್ನು ಬಟ್ಟೆಯಿಂದ ಸುತ್ತಿ ಕೃಷಿ ಹೊಂಡಕ್ಕೆ ಎಸೆಯಲಾಗಿತ್ತು. ನಂತರ ನವಜಾತ ಶಿಶುವನ್ನು ಸ್ಥಳೀಯರು ಮತ್ತು ಆಶಾ ಕಾರ್ಯಕರ್ತರು ರಕ್ಷಿಸಿ ನಗರದ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನವಜಾತ ಶಿಶು ಇಂದು ಮೃತಪಟ್ಟಿದೆ. ನಗರದ ಕೆ.ಆರ್. ಆಸ್ಪತ್ರೆಯ ಶವಗಾರದಲ್ಲಿ ನವಜಾತ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಈ ಕುರಿತು ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿ ಗುರುದೇವ್ ಮಾತನಾಡಿ, "ಪೋಷಕರು ಮಗುವನ್ನು ಜಮೀನಿನ ಕೃಷಿ ಹೊಂಡಕ್ಕೆ ಎಸೆದು ಹೋಗಿದ್ದಾರೆ. ನಂತರ ಸ್ಥಳೀಯರು ಈ ವಿಷಯವನ್ನ ತಕ್ಷಣ ನಮಗೆ ತಿಳಿಸಿದ್ದು, ನಾವು ಮತ್ತು ಆಶಾ ಕಾರ್ಯಕರ್ತರು ಮಗುವನ್ನ ರಕ್ಷಣೆ ಮಾಡಿ, ಆಂಬ್ಯುಲೆನ್ಸ್ನಲ್ಲಿ ಚೆಲುವಾಂಬ ಆಸ್ಪತ್ರೆಗೆ ರವಾನಿಸಿದ್ದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ" ಎಂದು ತಿಳಿಸಿದರು.
ದತ್ತು ಕೇಂದ್ರದ ಸಿಬ್ಬಂದಿ ಹೇಳಿದ್ದೇನು?: "ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನವಜಾತ ಶಿಶುವನ್ನು ಜಮೀನೊಂದರ ಕೃಷಿ ಹೊಂಡಕ್ಕೆ ಎಸೆಯಲಾಗಿತ್ತು. ಬೆಳಗ್ಗೆ ಶಿಶು ಆಳುವ ಶಬ್ದ ಕೇಳಿದ ಸ್ಥಳೀಯರು, ನಮ್ಮ ಇಲಾಖೆಗೆ ಮಾಹಿತಿ ನೀಡಿದರು. ನಾವು ತಕ್ಷಣ ಮಗವನ್ನು ಚೆಲುವಾಂಬ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದೆವು ಆದರೆ, ಶಿಶು ಚಿಕಿತ್ಸೆ ಮೃತಪಟ್ಟಿದೆ. ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಎಸೆದಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ಮೃತ ಶಿಶು ಯಾರದ್ದು ಎಂಬ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ಮದುವೆಯಾಗದ ಜೋಡಿಯ ಶಿಶು ಇರಬಹುದು ಎಂಬ ಅನುಮಾನ ಇದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಬಗ್ಗೆ ಪರೀಶೀಲನೆ ಮಾಡುತ್ತಿದ್ದೇವೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ" ಎಂದರು.
"ಸ್ಥಳೀಯರು ಮಗುವಿನ ಪೋಷಕರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಮೈನರ್ ಹೆಣ್ಣು ಮಕ್ಕಳು ಈ ರೀತಿ ಮಾಡುತ್ತಿರುವ ಪ್ರಕರಣಗಳು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿವೆ. ಇಂಥವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡುತ್ತಾರೆ. ಸದ್ಯ ಶಿಶುವಿನ ಮರಣೋತ್ತರ ಪರೀಕ್ಷೆ ನಡೆದಿದೆ. ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ, ಮಗುವಿನ ಡಿಎನ್ಐ ಪರೀಕ್ಷೆ ನಡೆಸಲಾಗುತ್ತದೆ. ಅದರ ಸಹಾಯದಿಂದ ಪೊಲೀಸರು ತನಿಖೆ ಮಾಡುತ್ತಾರೆ. ನಾವು ಇದರ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತೇವೆ. ಒಂದು ವೇಳೆ ಪೋಷಕರಿಗೆ ಮಗು ಬೇಡವಾದಲ್ಲಿ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಗುವನ್ನು ಒಪ್ಪಿಸಬಹುದು. ನಾವು ಆ ಮಗುವನ್ನು ಮಕ್ಕಳಿಲ್ಲದ ದಂಪತಿಗೆ ದತ್ತು ನೀಡುತ್ತೇವೆ" ಎಂದು ತಿಳಿಸಿದರು.
"ನಮ್ಮಲ್ಲಿ ಮಕ್ಕಳ ದತ್ತು ಕೇಂದ್ರ ಇದ್ದು, ಇದುವರೆಗೂ 60 ಮಕ್ಕಳು ನಮ್ಮ ಕೇಂದ್ರಕ್ಕೆ ಬಂದಿವೆ. ಯಾರಿಗೆ ಮದುವೆ ಅಗಿ ಮಕ್ಕಳು ಇಲ್ಲ ಅವರಿಗೆ ಕಾನೂನು ಬದ್ಧವಾಗಿ ದತ್ತು ನೀಡಲಾಗುತ್ತದೆ. ಮಗು ಬೇಡವಾದರೆ ಯಾರು ಬಿಸಾಕಬೇಡಿ. ಅದನ್ನು ನಮಗೆ ಒಪ್ಪಿಸಿದರೆ ನಾವು ಕಾನೂನಿನ ರೀತಿಯಲ್ಲೇ ಮೂರು ತಿಂಗಳ ಕಾಲ ಹಾರೈಕೆ ಮಾಡಿ, ದತ್ತು ನೀಡುತ್ತೇವೆ.
ಸರ್ಕಾರದ ವತಿಯಿಂದ ಮಮತೆಯ ತೊಟ್ಟಿಲು ಎಂಬ ಕಾರ್ಯಕ್ರಮ ಇದೆ. ಯಾರು ಮಗುವನ್ನು ಬಿಸಾಕಬೇಡಿ ಅಥವಾ ಮಾರಟ ಮಾಡಬೇಡಿ. ಯಾರಿಗೆ ಮಕ್ಕಳು ಬೇಡ ಅಂಥವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚೈಲ್ಡ್ ಲೈನ್, ಖಾಸಗಿ ದತ್ತು ಕೇಂದ್ರಗಳನ್ನು ಸಂಪರ್ಕ ಮಾಡಿ" ಎಂದು ಮನವಿ ಮಾಡಿದರು.
ಇದನ್ನೂ ಓದಿ: ಮೈಸೂರು: ಚರಂಡಿಯಲ್ಲಿ ಸಿಕ್ಕ ಜೀವಂತ ನವಜಾತ ಶಿಶುವಿನ ತಾಯಿ ಪತ್ತೆ
ಇದನ್ನೂ ಓದಿ: ಚರಂಡಿಯಲ್ಲಿ ನವಜಾತ ಶಿಶು ಪತ್ತೆ, ಸರ್ಕಾರಿ ಆಸ್ಪತ್ರೆಗೆ ರವಾನೆ; ಹೆಚ್ಡಿ ಕೋಟೆ ತಾಲೂಕಿನಲ್ಲಿ ಘಟನೆ