ಮೈಸೂರು : ಮಾಡಿದ ಸಾಲದ ಕಂತು ಕಟ್ಟಲಾರದೆ, ರೈತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ. ಸಂಬಂಧಿಕರು ಮಹಿಳೆ ಸಾವಿಗೆ ಸಾಲ ನೀಡಿದ ಸಂಸ್ಥೆಗಳ ಕಿರುಕುಳವೇ ಕಾರಣವೆಂದು ಆರೋಪಿಸಿದ್ದು, ಈ ಸಂಬಂದ ನಂಜನಗೂಡು ಗಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೀಗೆ ಆತ್ಮಹತ್ಯೆಗೆ ಶರಣಾದ ಮಹಿಳೆ ಜಯಶೀಲ (53). ಇವರು ನಂಜನಗೂಡು ತಾಲ್ಲೂಕಿನ ಅಂಬಳೆ ಗ್ರಾಮದ ನಿವಾಸಿಯಾಗಿದ್ದು, ಚಿಕ್ಕ ಮನೆ ನಿರ್ಮಿಸಿಕೊಂಡು ವ್ಯವಸಾಯ ಹಾಗೂ ಹಸು ಸಾಕಾಣಿಕೆ ಮಾಡುತ್ತಿದ್ದರು. ಹೈನುಗಾರಿಕೆ ಮಾಡಲು ಗ್ರಾಮಕ್ಕೆ ಬರುವ ವಿವಿಧ ಮೈಕ್ರೋ ಫೈನಾನ್ಸ್ ಗಳಲ್ಲಿ 5 ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಿದ್ದರು. ಇದಕ್ಕೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ಇಎಂಐ ಕಟ್ಟುತ್ತಿದ್ದರು. ಇತ್ತೀಚಿಗೆ ಹಸು ಸಾಲ ತೆಗೆದುಕೊಂಡು , ಹಸುವನ್ನು ಖರೀದಿಸಿದ್ದರು. ಆದ್ರೆ ದುರಾದೃಷ್ಟವಶಾತ್ ಆ ಹಸು ಆನಾರೋಗ್ಯದಿಂದ ಇತ್ತೀಚಿಗೆ ಮೃತಪಟ್ಟಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ತಲುಪಿದ್ದ ಮಹಿಳೆ ಜಯಶೀಲ, ಸಮೀಪದ ಹುಲ್ಲಹಳ್ಳಿ ಪಟ್ಟಣಕ್ಕೆ ಹೋಗಿ, ತನ್ನ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದೂರಿನಲ್ಲಿ ವಿವಿಧ ಮೈಕ್ರೋ ಫೈನಾನ್ಸ್ ಗಳಿಂದ ತೆಗೆದುಕೊಂಡಿದ್ದ ಸಾಲ ಮರು ಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿವರಿಸಲಾಗಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣವರ್ಧನ್ ಅವರನ್ನ ದೂರುವಾಣಿಯಲ್ಲಿ ಸಂಪರ್ಕಿಸಿದಾಗ , ಮಹಿಳೆಯ ಆತ್ಮಹತ್ಯೆಗೆ ನಿಖರವಾದ ಕಾರಣ ಏನು? ಎಂಬುದು ತನಿಖೆಯಿಂದ ತಿಳಿಯಲಿದೆ. ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಈಟಿವಿ ಭಾರತ ಗೆ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಫೈನಾನ್ಸ್ನಿಂದ ಮನೆ ಜಪ್ತಿ ಆರೋಪ: ಗರ್ಭಿಣಿ ಸೇರಿ ಕುಟುಂಬಸ್ಥರು ಮನೆ ಹೊರಗೆ ವಾಸ!