NASA 25 Crore Rupees Challenge:ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಭವಿಷ್ಯದ ಅನೇಕ ಮಹತ್ವದ ಕಾರ್ಯಾಚರಣೆಗಳನ್ನು ಯೋಜಿಸಿದೆ. ಗಗನಯಾತ್ರಿಗಳು ಚಂದ್ರನ ಮೇಲೆ ಮತ್ತು ಮಂಗಳದಂತಹ ಇತರ ಆಕಾಶಕಾಯಗಳ ಮೇಲೆ ದೀರ್ಘಕಾಲ ಉಳಿಯಲು ಸಿದ್ಧರಾಗಿದ್ದು, ಈ ಅವಧಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮರುಬಳಕೆ ಮಾಡಲು ನಾಸಾ ಪರಿಹಾರ ಹುಡುಕುತ್ತಿದೆ. ಇದಕ್ಕಾಗಿ ಹೊಸ ಚಾಲೆಂಜ್ವೊಂದನ್ನು ಘೋಷಿಸಲಾಗಿದೆ. ಇದರ ಹೆಸರು LunaRecycle Challenge. ಇದರಲ್ಲಿ ವಿಜೇತರಿಗೆ 3 ಮಿಲಿಯನ್ ಡಾಲರ್ ಅಂದ್ರೆ ಸುಮಾರು 25 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.
ವರದಿಗಳ ಪ್ರಕಾರ, ಭವಿಷ್ಯದಲ್ಲಿ ಗಗನಯಾತ್ರಿಗಳು ಚಂದ್ರನ ಮೇಲೆ ಅಥವಾ ಇತರ ಸ್ಥಳಗಳಲ್ಲಿ ದೀರ್ಘಕಾಲ ತಂಗಿದಾಗ ಆಹಾರ ಪ್ಯಾಕೇಜಿಂಗ್ ತ್ಯಾಜ್ಯ, ಗಗನಯಾತ್ರಿಗಳ ತ್ಯಾಜ್ಯ ಬಟ್ಟೆಗಳು, ವಿಜ್ಞಾನ ಪ್ರಯೋಗಗಳಿಗೆ ಸಂಬಂಧಿಸಿದ ವಸ್ತುಗಳು ಸೇರಿದಂತೆ ಇತ್ಯಾದಿ ಅನೇಕ ರೀತಿಯ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ಅಂತಹ ತ್ಯಾಜ್ಯವನ್ನು ಎದುರಿಸಲು ನಾಸಾ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಲು ಬಯಸಿದೆ. ಆ ತಂತ್ರಜ್ಞಾನಕ್ಕೆ ಹೆಚ್ಚು ವಿದ್ಯುತ್ ಬಳಕೆಯಾಗಬಾರದು ಮತ್ತು ಬಳಸಲು ಸುಲಭವಾಗಿರಬೇಕು ಎಂಬುದು ನಾಸಾ ಯೋಜನೆ.
ಇದನ್ನು ಗಮನದಲ್ಲಿಟ್ಟುಕೊಂಡು ನಾಸಾ ಹೊಸ ಸ್ಪರ್ಧೆ ಆರಂಭಿಸಿದೆ. ಇದು ಎರಡು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಮೊದಲನೆಯದು- ಹಾರ್ಡ್‌ವೇರ್ ಮತ್ತು ಇತರ ಘಟಕಗಳ ಮೂಲಮಾದರಿಯನ್ನು ಸಿದ್ಧಪಡಿಸುವುದು. ಎರಡನೆಯದು ಸಂಪೂರ್ಣ ಮರುಬಳಕೆ ವ್ಯವಸ್ಥೆಯ ವರ್ಚುವಲ್ ಪ್ರತಿಕೃತಿಯನ್ನು ತಯಾರಿಸುವುದು. ಎರಡು ವಿಧಾನಗಳನ್ನು ಒದಗಿಸುವ ಮೂಲಕ, ಪ್ರಪಂಚದಾದ್ಯಂತದ ಸಂಶೋಧಕರು ಈ ಸ್ಪರ್ಧೆಯ ಭಾಗವಾಗುತ್ತಾರೆ ಎಂದು ನಾಸಾ ತಿಳಿಸಿದೆ.
ಡಿಜಿಟಲ್ ಟ್ವಿನ್ ಟ್ರ್ಯಾಕ್ ಹಲವಾರು ವರ್ಚುವಲ್ ಡಿಸೈನ್ ಕಾನ್ಫಿಗರೇಶನ್‌ಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ತಾತ್ಕಾಲಿಕ ಮೂಲಮಾದರಿಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ, ಗಣನೀಯ ಸಮಯ ಮತ್ತು ವೆಚ್ಚ ಉಳಿಸುತ್ತದೆ. LunaRecycle ಸವಾಲು ಇಂಧನ-ಸಮರ್ಥ, ಕಡಿಮೆ-ದ್ರವ್ಯರಾಶಿ ಮತ್ತು ಕಡಿಮೆ-ಪರಿಣಾಮದ ಮರುಬಳಕೆ ಪರಿಹಾರಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಸ್ಫೂರ್ತಿ ನೀಡುವ ಗುರಿ ಹೊಂದಿದೆ. ಅಂತಿಮವಾಗಿ ದೀರ್ಘಾವಧಿಯ ಚಂದ್ರನ ಕಾರ್ಯಾಚರಣೆಗಳ ಸಮರ್ಥನೀಯತೆಯನ್ನು ಸುಧಾರಿಸುತ್ತದೆ.