ನವದೆಹಲಿ: ಟೆಸ್ಲಾ ಆಟೋಪೈಲಟ್ ತಂಡದ ಪ್ರಥಮ ಉದ್ಯೋಗಿಗಳಲ್ಲಿ ಒಬ್ಬರಾಗಿ ಸೇರಿಕೊಂಡಿದ್ದ ಭಾರತೀಯ ಮೂಲದ ಎಂಜಿನಿಯರ್ ಅಶೋಕ್ ಎಲ್ಲುಸ್ವಾಮಿ ಅವರನ್ನು ಸಿಇಒ ಎಲೋನ್ ಮಸ್ಕ್ ಭಾನುವಾರ ಶ್ಲಾಘಿಸಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ಅಶೋಕ್ ಎಲ್ಲುಸ್ವಾಮಿ ಮತ್ತು ಅವರನ್ನು ಒಳಗೊಂಡ ನಮ್ಮ ಅದ್ಭುತ ತಂಡ ಇಲ್ಲದಿರುತ್ತಿದ್ದರೆ, ನಮಗೆ ಬೇಕಾದ ತಂತ್ರಜ್ಞಾನವನ್ನು ನೀಡಬಲ್ಲ, ಅಸ್ತಿತ್ವದಲ್ಲಿಲ್ಲದ ಕಂಪನಿಯನ್ನು ಹುಡುಕುತ್ತ ನಾವೊಂದು ಸಣ್ಣ ಕಾರು ಕಂಪನಿ ಮಾತ್ರವಾಗಿರುತ್ತಿದ್ದೆವು" ಎಂದು ಮಸ್ಕ್ ಹೇಳಿದ್ದಾರೆ.
ಟೆಸ್ಲಾದಲ್ಲಿ ಎಐ ಮತ್ತು ಅಟಾನಮಿ ವಿಭಾಗವನ್ನು ಬೆಳೆಸುವಲ್ಲಿ ಮಸ್ಕ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎಲ್ಲುಸ್ವಾಮಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.
"ನಮ್ಮ ಆಲೋಚನೆಗಳನ್ನು ವಾಸ್ತವಿಕವಾಗಿ ಸಾಧಿಸಲು ಸಾಧ್ಯವಾಗದು ಎಂಬುದು ತಿಳಿದಿರುವ ಆ ಸಮಯದಲ್ಲಿ ಕೂಡ ಮಸ್ಕ್ ಅವನ್ನು ಸಾಧಿಸುವಂತೆ ನಮಗೆ ಪ್ರೋತ್ಸಾಹ ನೀಡುತ್ತಿದ್ದರು" ಎಂದು ಎಲ್ಲುಸ್ವಾಮಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಲ್ಲುಸ್ವಾಮಿ ಅವರ ಪೋಸ್ಟ್ ಅನ್ನು ಎಕ್ಸ್ನಲ್ಲಿ ಉಲ್ಲೇಖಿಸಿದ ಮಸ್ಕ್, "ಧನ್ಯವಾದಗಳು ಅಶೋಕ್! ಟೆಸ್ಲಾ ಎಐ / ಆಟೋಪೈಲಟ್ ತಂಡಕ್ಕೆ ಸೇರಿದ ಮೊದಲ ವ್ಯಕ್ತಿ ಅಶೋಕ್ ಆಗಿದ್ದಾರೆ ಮತ್ತು ಎಲ್ಲಾ ಎಐ / ಆಟೋಪೈಲಟ್ ಸಾಫ್ಟ್ ವೇರ್ ನಿರ್ಮಾಣದಲ್ಲಿ ಅವರೇ ನೇತೃತ್ವ ವಹಿಸಿದ್ದಾರೆ" ಎಂದು ಶ್ಲಾಘಿಸಿದ್ದಾರೆ.
2014 ರ ಹಿಂದಿನ ಒಂದು ಉದಾಹರಣೆಯನ್ನು ಎಲ್ಲುಸ್ವಾಮಿ ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಹಾಸ್ಯಾಸ್ಪದವಾಗಿ ಕಾಣಿಸುವ ಚಿಕ್ಕದೊಂದು ಕಂಪ್ಯೂಟರ್ ಬಳಸಿ ಆಟೋಪೈಲಟ್ ಕೆಲಸ ಪ್ರಾರಂಭವಾಗಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.
"2014 ರಲ್ಲಿ ಆಟೋಪೈಲಟ್ ಕೆಲಸ ಸಣ್ಣ ಕಂಪ್ಯೂಟರ್ ಒಂದರಲ್ಲಿ ಪ್ರಾರಂಭವಾಯಿತು. ಆಗ ಅದು ಕೇವಲ 384 ಕೆಬಿ ಮೆಮೊರಿ ಮತ್ತು ಪುನಿ ಕಂಪ್ಯೂಟ್ ಅನ್ನು ಹೊಂದಿತ್ತು (ಸ್ಥಳೀಯ ಫ್ಲೋಟಿಂಗ್ ಪಾಯಿಂಟ್ ಗಣಿತವನ್ನು ಸಹ ಹೊಂದಿರಲಿಲ್ಲ). ಇದೇ ಕಂಪ್ಯೂಟರ್ ಬಳಸಿ ಲೇನ್ ಕೀಪಿಂಗ್, ಲೇನ್ ಬದಲಾವಣೆ, ವಾಹನಗಳಿಗೆ ರೇಖಾಂಶ ನಿಯಂತ್ರಣ, ವಕ್ರತೆ ಇತ್ಯಾದಿಗಳನ್ನು ಸಿದ್ಧಗೊಳಿಸುವಂತೆ ಮಸ್ಕ್ ಎಂಜಿನಿಯರಿಂಗ್ ತಂಡಕ್ಕೆ ಸೂಚಿಸಿದ್ದರು" ಎಂದು ಎಂಜಿನಿಯರ್ ಎಲ್ಲುಸ್ವಾಮಿ ಬರೆದಿದ್ದಾರೆ.
"ತಂಡದಲ್ಲಿ ಅನೇಕರು ಈ ಪ್ರಯತ್ನವನ್ನು ಹುಚ್ಚುತನ ಎಂದು ಭಾವಿಸಿದ್ದರು. ಆದರೆ ಮಸ್ಕ್ ಮಾತ್ರ ಯಾವತ್ತೂ ವಿಶ್ವಾಸ ಕಳೆದುಕೊಳ್ಳಲಿಲ್ಲ ಮತ್ತು ಕೆಲಸ ಮುಂದುವರಿಸುವಂತೆ ಹುರಿದುಂಬಿಸಿದರು. ಅದರ ಫಲವಾಗಿ 2015 ರಲ್ಲಿ ಎಲ್ಲಾ ಅಡೆತಡೆಗಳನ್ನು ಮೀರಿ ಟೆಸ್ಲಾ ವಿಶ್ವದ ಮೊದಲ ಆಟೋಪೈಲಟ್ ವ್ಯವಸ್ಥೆಯನ್ನು ತಯಾರಿಸಿತು. ಇದಕ್ಕೆ ಹತ್ತಿರವಾದ ಮತ್ತೊಂದು ಉತ್ಪನ್ನ ಮಾರುಕಟ್ಟೆಗೆ ಬರಲು ವರ್ಷಗಳೇ ಹಿಡಿದವು" ಎಂದು ಎಲ್ಲುಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ : ಮಂಗಳ ಗ್ರಹದ ಕಲ್ಲು, ಮಣ್ಣು ತರುವ ಅಧ್ಯಯನ: 7 ಕಂಪನಿಗಳಿಗೆ $10 ಮಿಲಿಯನ್ ನಿಧಿ ಮೀಸಲಿಟ್ಟ ನಾಸಾ - Mars Sample Return Mission