ಬೆಂಗಳೂರು: ಅಶ್ಲೀಲ ಮತ್ತು ಅಸಭ್ಯ ವಿಷಯಗಳನ್ನು ಹೊಂದಿರುವ 18 ಒಟಿಟಿ ಫ್ಲಾಟ್ಫಾರ್ಮ್ ಮತ್ತು ಸಾಮಾಜಿಕ ಮಾಧ್ಯಮದ ಖಾತೆಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ಸಾರ್ವಜನಿಕರಿಗೆ ಲಭ್ಯವಾಗದಂತೆ ಬ್ಯಾನ್ ಮಾಡಿ ಆದೇಶಿಸಿದೆ.
ಈ ಕುರಿತು ಹೇಳಿಕೆ ಪ್ರಕಟಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಹೊಂದಿರುವ 19 ವೆಬ್ಸೈಟ್, 10 ಆ್ಯಪ್ (ಏಳು ಗೂಗಲ್ ಪ್ಲೇ ಸ್ಟೋರ್, ಮೂರು ಆಪಲ್ ಆ್ಯಪ್ ಸ್ಟೋರ್ನಲ್ಲಿ ಲಭ್ಯವಿರುವ) ಮತ್ತು 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗದಂತೆ ತೆಗೆದು ಹಾಕಲಾಗಿದೆ ಎಂದು ತಿಳಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 200 ಅಡಿಯಲ್ಲಿ, ಸೆಕ್ಷನ್ 67 ಮತ್ತು 67ಎ ಉಲ್ಲಂಘನೆ, ಐಪಿಸಿ ಸೆಕ್ಷನ್ 292 ಮತ್ತು 1986ರ ಮಹಿಳೆಯರ ಅಸಭ್ಯ ಪ್ರಾತಿನಿದ್ಯ (ತಿದ್ದುಪಡಿ) ಕಾಯ್ದೆ ಸೆಕ್ಷನ್ 4ರ ಅಡಿ ಕ್ರಮ ಕೈಗೊಳ್ಳಲಾಗಿದೆ. ಈ ಒಟಿಟಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಈ ಕುರಿತು ತಿಳಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಚಿವರಾದ ಅನುರಾಗ್ ಠಾಕೂರ್, ಸೃಜನಾತ್ಮಕತೆ ಅಭಿವ್ಯಕ್ತಿ ಹೆಸರಿನಲ್ಲಿ ಫ್ಲಾಟ್ಫಾರ್ಮ್ಗಳ ಅಶ್ಲೀಲತೆ ಮತ್ತು ಅಸಭ್ಯತೆ, ದೌರ್ಜನ್ಯದ ಕುರಿತು ಉತ್ತೇಜಿಸಿದಂತೆ ಅವುಗಳ ಜವಾಬ್ದಾರಿ ಕುರಿತು ಒತ್ತಿ ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ನಿಷೇಧದ ಕಾರಣಗಳ ವಿವರಣೆ ನೀಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಈ ಫ್ಲಾಟ್ಫಾರ್ಮ್ಗಳಲ್ಲಿ ಗಣನೀಯ ಪ್ರಮಾಣದಲ್ಲಿ ಅಶ್ಲೀಲತೆ, ಅಸಭ್ಯತೆ ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿಯ ಚಿತ್ರಿಸಲಾಗಿದೆ. ಇದರಲ್ಲಿ ಹಲವು ವಿಷಯದಲ್ಲಿ ನಗ್ನ ಮತ್ತು ಲೈಂಗಿಕತೆ ಪ್ರಚೋದಿಸುವ ಕಂಟೆಂಟ್ ಹೊಂದಿವೆ ಎಂದು ತಿಳಿಸಿದೆ.
ಇದರಲ್ಲಿ ಗೂಗಲ್ ಸ್ಟೋರ್ನಲ್ಲಿ ಲಭ್ಯವಿರುವ ಒಂದು ಒಟಿಟಿಯೂ 1 ಕೋಟಿ ಡೌನ್ಲೋಡ್ ಕಂಡರೆ, ಎರಡು ಒಟಿಟಿಗಳು 50 ಲಕ್ಷ ಡೌನ್ಲೋಡ್ ಆಗಿವೆ. ಇನ್ನು ಸಾಮಾಜಿಕ ಮಾಧ್ಯಮದ ಫ್ಲಾಟ್ಫಾರ್ಮ್ನಲ್ಲಿ 32 ಲಕ್ಷಕ್ಕೂ ಅಧಿಕ ಬಳಕೆದಾರರಿರುವುದು ಕಂಡು ಬಂದಿದೆ. ಸದ್ಯ ಐಎಂಬಿ ಸಚಿವಾಲಯದ ನಿಷೇಧಿಸಿರುವ 57 ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ 12 ಫೇಸ್ಬುಕ್ ಅಕೌಂಟ್, 17 ಇನ್ಸ್ಟಾಗ್ರಾಂ ಖಾತೆ ಮತ್ತು 16 ಎಕ್ಸ್ ಹಾಗೂ 12 ಯೂಟ್ಯೂಬ್ ಅಕೌಂಟ್ಗಳು ಸೇರಿವೆ.
ಇದನ್ನೂ ಓದಿ: ಎಐನಿಂದ ರಚಿತವಾದ ಡೀಪ್ಫೇಕ್ ಕುರಿತು ಸಾಮಾಜಿಕ ಜಾಲತಾಣ: ಐಟಿ ದೈತ್ಯರಿಗೆ ಕೇಂದ್ರ ಸರ್ಕಾರದ ಸಲಹೆ