ಟೋಕಿಯೊ(ಜಪಾನ್): ಚಂದ್ರನ ಮೇಲಿಳಿದಿರುವ ಜಪಾನ್ನ ಮಾನವರಹಿತ ಬಾಹ್ಯಾಕಾಶ ನೌಕೆಯು 10 ಚಂದ್ರ ಶಿಲೆಗಳನ್ನು ವಿಶ್ಲೇಷಿಸುವ ಡೇಟಾ ಸೆರೆಹಿಡಿದಿದ್ದು, ಅದನ್ನು ಭೂಮಿಗೆ ರವಾನಿಸಿದೆ. ಇದು ನಿರೀಕ್ಷೆಗಿಂತ ಹೆಚ್ಚಿನ ಸಾಧನೆಯಾಗಿದ್ದು, ಈ ಮಾಹಿತಿಯು ಚಂದ್ರನ ಮೂಲದ ಬಗ್ಗೆ ಸುಳಿವು ನೀಡಲು ಸಹಾಯಕವಾಗಲಿದೆ ಎಂದು ಜಪಾನ್ನ ಬಾಹ್ಯಾಕಾಶ ಸಂಸ್ಥೆ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
SLIM ಎಂದು ಕರೆಯಲಾಗುವ, ಚಂದ್ರನ ಮೇಲಿನ ಬಂಡೆಯ ಸಂಯೋಜನೆಯನ್ನು ಅಧ್ಯಯನ ಮಾಡಲು ಕಳೆದ ತಿಂಗಳು ಚಂದ್ರನ ಮೇಲೆ ಇಳಿದ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಮೂನ್ ಲ್ಯಾಂಡರ್ ನಾಲ್ಕು ದಿನಗಳ ಕಾಲ ತಮ್ಮ ಮಲ್ಟಿ - ಬ್ಯಾಂಡ್ ಸ್ಪೆಕ್ಟ್ರಲ್ ಕ್ಯಾಮೆರಾ ಬಳಸಿ ಚಂದ್ರನ ಬಂಡೆಗಳನ್ನು ಪರೀಕ್ಷಿಸುವ ಕೆಲಸ ಮಾಡಿದೆ ಎಂದು ಜಪಾನ್ ಏರೋಸ್ಪೇಸ್ ಎಕ್ಸ್ಪ್ಲೊರೇಶನ್ ಏಜೆನ್ಸಿಯ ಯೋಜನಾ ವ್ಯವಸ್ಥಾಪಕ ಶಿನಿಚಿರೊ ಸಕೈ ಹೇಳಿದ್ದಾರೆ.
ಜಪಾನ್ ಪಾಲಿಗೆ ಈ ಚಂದ್ರಯಾನ ಮೊದಲನೆಯದಾಗಿದೆ. ಜಪಾನ್ನ ಬಾಹ್ಯಾಕಾಶ ನೌಕೆಯು ಜನವರಿ 20 ರಂದು ಅತ್ಯಂತ ನಿಖರವಾಗಿ ಚಂದ್ರನ ಮೇಲೆ ಸ್ಪರ್ಶ ಮಾಡಿತ್ತು. ಆರಂಭದಲ್ಲಿ ಅದು ತಪ್ಪು ದಾರಿಯಲ್ಲಿ ಇಳಿದಿತ್ತು ಮತ್ತು ಅದರ ಸೌರ ಫಲಕಗಳು ಸೂರ್ಯನನ್ನು ನೋಡಲು ಸಾಧ್ಯವಾಗಿರಲಿಲ್ಲ. ಈ ಸಮಯದಲ್ಲಿ ಭೂಮಿಯೊಂದಿಗಿನ ಸಂಕ್ಷಿಪ್ತ ಸಂಪರ್ಕದ ನಂತರ ಫಲಕಗಳನ್ನು ಆಫ್ ಮಾಡಲಾಗಿತ್ತು. ಆದರೆ ಆಶ್ಚರ್ಯಕರವಾಗಿ ಎಂಟನೇ ದಿನದಂದು ನೌಕೆಯು ಕೆಲಸ ಮಾಡಲು ಪ್ರಾರಂಭಿಸಿತ್ತು ಮತ್ತು ಭೂಮಿಯ ಮೇಲಿನ ಜಾಕ್ಸಾದಲ್ಲಿನ ಕಮಾಂಡ್ ಸೆಂಟರ್ನೊಂದಿಗೆ ಸಂವಹನವನ್ನು ಯಶಸ್ವಿಯಾಗಿ ಮರುಸ್ಥಾಪಿಸಲು ಅನುವು ಮಾಡಿಕೊಟ್ಟಿತ್ತು.