Surface To Air Missile Test: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಗುರುವಾರ ಮಧ್ಯಾಹ್ನ 3.20ಕ್ಕೆ ಒಡಿಶಾ ಕರಾವಳಿಯಲ್ಲಿ ಚಾಂಡಿಪುರದಲ್ಲಿ ಕಡಿಮೆ ವ್ಯಾಪ್ತಿಯ ಭೂ ಮೇಲ್ಮೈಯಿಂದ ವಾಯುವಿನತ್ತ ಹಾರಿ ದಾಳಿ ಮಾಡಬಲ್ಲ ಕ್ಷಿಪಣಿಯನ್ನು (SRSAM) ಯಶಸ್ವಿಯಾಗಿ ಪರೀಕ್ಷಿಸಿದೆ. ಇದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ಷಿಪಣಿ ಎನ್ನುವುದು ಗಮನಾರ್ಹ.
ನೌಕಾಪಡೆಯ ಯುದ್ಧನೌಕೆಗಳಲ್ಲಿ ಈ ಕ್ಷಿಪಣಿಯನ್ನು ಲಂಬವಾಗಿಟ್ಟು ಉಡಾಯಿಸಬಹುದು. ಆದ್ದರಿಂದ ಇದನ್ನು 'ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್' (VR-SRSAM) ಎಂದು ಕರೆಯಲಾಗಿದೆ. ಇದನ್ನು ಭೂ ಮೇಲ್ಮೈಯಿಂದಲೂ ಉಡಾವಣೆ ಮಾಡಬಹುದು.
ಕ್ಷಿಪಣಿಯು ಸ್ವದೇಶಿ ರೇಡಿಯೋ ಫ್ರೀಕ್ವೆನ್ಸಿ ಸೀಕರ್ (RF Seeker) ಹೊಂದಿದ್ದು, ನಿಖರತೆ ಹೆಚ್ಚಿಸುತ್ತದೆ. ಕಡಿಮೆ ಎತ್ತರದಲ್ಲಿ ಹಾರುವ ಗುರಿಗಳನ್ನು ಉರುಳಿಸುವಲ್ಲಿ ಇದು ಸಮರ್ಥವಾಗಿದೆ.
80 ಕಿ.ಮೀ ಗುರಿ: ಈ ಕ್ಷಿಪಣಿಯ ತೂಕ 170 ಕೆ.ಜಿ. ಇದ್ದು, 12.9 ಅಡಿ ಉದ್ದವಿದೆ. 7 ಇಂಚು ವ್ಯಾಸ ಹೊಂದಿದೆ. ಇದರಲ್ಲಿ ಅಳವಡಿಸಲಾದ ರೆಕ್ಕೆಗಳು 20 ಇಂಚು ಇವೆ. ಘನ ಇಂಧನ ರಾಕೆಟ್ ಎಂಜಿನ್ ಸಹಾಯದಿಂದ ಹಾರುವ ಕ್ಷಿಪಣಿಯು 80 ಕಿಲೋಮೀಟರ್ ವ್ಯಾಪ್ತಿಯ ಗುರಿಯನ್ನು ಹೊಡೆದುರುಳಿಸಬಲ್ಲದು.
ಕ್ಷಿಪಣಿ ಗರಿಷ್ಠ 52 ಸಾವಿರ ಅಡಿ ಎತ್ತರ ತಲುಪಬಲ್ಲದು. ಇದರ ಗರಿಷ್ಠ ವೇಗ 4.5 ಮ್ಯಾಕ್. ಅಂದರೆ ಗಂಟೆಗೆ 5556.6 ಕಿಲೋಮೀಟರ್ ವೇಗದೊಂದಿಗೆ ಚಲಿಸುತ್ತದೆ. ಶತ್ರುಗಳಿಗೆ ತಪ್ಪಿಸಿಕೊಳ್ಳಲು ಸಮಯ ಸಿಗದಷ್ಟು ವೇಗ ಎನ್ನಬಹುದು. 360 ಡಿಗ್ರಿ ಮೂಲಕವೂ ತನ್ನ ಶತ್ರುವನ್ನು ಇದು ನಾಶಪಡಿಸುತ್ತದೆ ಎಂಬುದು ಇನ್ನೂ ವಿಶೇಷ.
DRDO ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ಜಂಟಿಯಾಗಿ ಈ ಕ್ಷಿಪಣಿಯನ್ನು ತಯಾರಿಸಿದೆ. ಕಡಿಮೆ ಎತ್ತರದಲ್ಲಿ ಹಾರುವ ಶತ್ರು ಹಡಗುಗಳು ಅಥವಾ ಕ್ಷಿಪಣಿಗಳನ್ನು ಇದು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ:ಒಡಿಶಾದಲ್ಲಿ ಇಂದು DRDO ಕ್ಷಿಪಣಿ ಪರೀಕ್ಷೆ: 6 ಗ್ರಾಮಗಳ 3 ಸಾವಿರ ನಿವಾಸಿಗಳ ಸ್ಥಳಾಂತರ - Missile Test