Immortal Jellyfish:ಮನುಷ್ಯ ಅಮರನಾಗೋಕೆ ಸಾಧ್ಯವೇ?. ಈ ಕುರಿತು ಶತಶತಮಾನಗಳಿಂದಲೂ ಸಾಕಷ್ಟು ಸಂಶೋಧನೆಗಳು ನಡೆದಿವೆ, ನಡೆಯುತ್ತಲೇ ಇವೆ. ಇದಕ್ಕಾಗಿ ಮನುಷ್ಯ ಬಹುತೇಕ ಎಲ್ಲ ಸಂಭಾವ್ಯ ಪರಿಹಾರಗಳನ್ನೂ ಪ್ರಯತ್ನಿಸಿದ್ದಾನೆ. ಧಾರ್ಮಿಕ ಅಂಶಗಳನ್ನೂ ಪರಿಗಣಿಸಿದ್ದಾನೆ. ಅಮರತ್ವದ ಬಗ್ಗೆ ನಾವು ಕಥೆಗಳಲ್ಲಿ ಓದಿರಬಹುದು/ಕೇಳಿರಬಹುದು. ಆದರೆ ನಿಜಜೀವನದಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ವಯಸ್ಸಾಗುವುದನ್ನು ನಿಲ್ಲಿಸುವ ಮತ್ತು ಸಾವನ್ನು ತಪ್ಪಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುವ ಒಂದು ಜೀವಿ ಇದೆ. ಇದರ ಹೆಸರು ಟರ್ರಿಟೋಪ್ಸಿಸ್ ಡೊಹ್ರ್ನಿ. 'ಅಮರ ಜೆಲ್ಲಿ ಫಿಶ್' ಎಂದೂ ಇದನ್ನು ಕರೆಯಲಾಗುತ್ತದೆ.
ಅಮರ ಜೆಲ್ಲಿ ಫಿಶ್:ಈ ಜೆಲ್ಲಿ ಮೀನುಗಳ ಜೀವನ ಚಕ್ರ ಇತರ ಜೆಲ್ಲಿ ಮೀನುಗಳಂತೆಯೇ ಇರುತ್ತದೆ. ಲಾರ್ವಾ ಮೂಲಕ ಜೀವಿಸಲು ಪ್ರಾರಂಭಿಸುತ್ತದೆ. ನಂತರ ಕ್ರಮೇಣ ಬೆಳೆದು ಮೇಲಿನ ಚಿತ್ರದಲ್ಲಿ ನೀವು ನೋಡಬಹುದಾದ ಆಕಾರ ಪಡೆಯುತ್ತದೆ. ಜೆಲ್ಲಿ ಮೀನು ಯಾವುದೇ ಪರಿಸರದ ಒತ್ತಡ ಅಥವಾ ದೈಹಿಕ ಗಾಯವನ್ನು ಎದುರಿಸಿದಾಗ ತನ್ನ ಜೀವನ ಚಕ್ರದ ಮೊದಲ ಹಂತಕ್ಕೆ ಮರಳಬಹುದು. ಅಂದರೆ ಅದು ಮತ್ತೆ ಯೌವನಾಕಾರ ಪಡೆಯಬಹುದು. ಈ ರೂಪಾಂತರ ಪ್ರಕ್ರಿಯೆಯನ್ನು 'ಟ್ರಾನ್ಸ್‌ಡಿಫರೆನ್ಷಿಯೇಶನ್' ಎನ್ನುವರು. ಇದು ಜೆಲ್ಲಿ ಮೀನುಗಳು ತನ್ನ ಜೀವನ ಚಕ್ರವನ್ನು ಮತ್ತೆ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
ಟ್ರಾನ್ಸ್ಡಿಫರೆನ್ಷಿಯೇಶನ್ನಲ್ಲಿ ಜೆಲ್ಲಿ ಮೀನುಗಳ ಜೀವಕೋಶಗಳು ಹೊಸ ಕೋಶಗಳಾಗಿ ಪುನರುತ್ಪಾದನೆ ಆಗಬಹುದು. ಇದರ ನಂತರ ಅದು ಮತ್ತೆ ಬೆಳವಣಿಗೆಯಾಗುತ್ತದೆ. ಈ ಪ್ರಕ್ರಿಯೆಯೇ 'ಮೆಡುಸಾ'. ಅಷ್ಟೇಕೆ? ವೃದ್ಧಾಪ್ಯ ಬಂದಾಗ ತನ್ನನ್ನು ತಾನು ಯೌವನದ ಸ್ಥಿತಿಗೆ ಮರಳಿಸುತ್ತದೆ!.
ವರದಿಯ ಪ್ರಕಾರ, ವೃದ್ಧಾಪ್ಯದಿಂದ ಯೌವನಕ್ಕೆ ಮರಳುವ ಈ ಪ್ರವೃತ್ತಿ ಶಾಶ್ವತವಾಗಿ ಮುಂದುವರಿಯಬಹುದು. ಇಂಥ ಜೆಲ್ಲಿ ಫಿಶ್‌ಗಳನ್ನು ಮೊದಲು 1883ರಲ್ಲಿ ಗುರುತಿಸಲಾಯಿತು. ಪ್ರಪಂಚದಾದ್ಯಂತ ಸಾಗರಗಳಲ್ಲಿ ಕಂಡುಬರುವ ಜೆಲ್ಲಿ ಫಿಶ್ ಗಾತ್ರದಲ್ಲಿ ತುಂಬಾ ಚಿಕ್ಕದು. ಉದಾಹರಣೆಗೆ, ನಿಮ್ಮ ಕಿರುಬೆರಳಿನ ಉಗುರಿನಷ್ಟೇ ದೊಡ್ಡದು. ಜೆಲ್ಲಿ ಫಿಶ್ ಜೈವಿಕವಾಗಿ ಅಮರತ್ವ ಹೊಂದಿದ್ದರೂ ಇತರ ಜೀವಿಗಳಂತೆ ಸಾಗರದಲ್ಲಿ ಅನೇಕ ಅಪಾಯಗಳನ್ನೆದುರಿಸುತ್ತದೆ.
ಟರ್ರಿಟೋಪ್ಸಿಸ್ ಡೊಹ್ರ್ನಿ ಜೆಲ್ಲಿ ಫಿಶ್ (Photo Credit: Natural History Museum) ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮಾಹಿತಿಯಂತೆ, ಟರ್ರಿಟೋಪ್ಸಿಸ್ ಡೊಹ್ರ್ನಿ ಜೆಲ್ಲಿ ಮೀನು ಪ್ರಭೇದವನ್ನು ಮೊದಲು ವಿಜ್ಞಾನಿಗಳು 1883ರಲ್ಲಿ ಕಂಡುಹಿಡಿದರು. ಆದರೆ ಅದರ ವಿಶಿಷ್ಟ ಗುಣಲಕ್ಷಣಗಳು ಅಥವಾ ಅಮರತ್ವವನ್ನು ಸುಮಾರು 100 ವರ್ಷಗಳ ನಂತರ, 1980ರಲ್ಲಿ ಕಂಡುಕೊಳ್ಳಲಾಯಿತು. ಕ್ರಿಶ್ಚಿಯನ್ ಸೋಮರ್ ಮತ್ತು ಜಾರ್ಜಿಯೊ ಬೊವೆಸ್ಟ್ರೆಲ್ಲೊ ಒಮ್ಮೆ ಈ ಜಾತಿಯ ಪಾಲಿಪ್‌ಗಳನ್ನು ಸಂಗ್ರಹಿಸಿದ್ದರು. ಇವರು ಇದನ್ನು ಮೆಡುಸಾದ ಪ್ರೌಢ ಹಂತ ತಲುಪುವವರೆಗೆ ಗಾಜಿನ ಜಾರ್‌ನಲ್ಲಿಟ್ಟರು. ಜೆಲ್ಲಿ ಮೀನುಗಳು ಮೊಟ್ಟೆಗಳನ್ನು ಬಿಡುಗಡೆ ಮಾಡಿ ಲಾರ್ವಾಗಳನ್ನು ಉತ್ಪಾದಿಸುತ್ತವೆ ಎಂಬುದು ಅವರ ಭಾವನೆಯಾಗಿತ್ತು. ಆದರೆ ಜಾರ್ ಅನ್ನು ಪರೀಕ್ಷಿಸಿದಾಗ, ಅನೇಕ ಹೊಸ ಪಾಲಿಪ್‌ಗಳನ್ನು ಕಂಡು ಅಚ್ಚರಿಗೊಂಡರು. ಆದರೆ ಅಪಾಯವನ್ನು ಅನುಭವಿಸಿದ ನಂತರ ಅವು ಸಂತಾನೋತ್ಪತ್ತಿ ಮಾಡದೇ ಬಾಲ್ಯಾವಸ್ಥೆಗೆ ಮರಳಬಹುದು ಎಂದು ಸಂಶೋಧನೆ ತೋರಿಸಿತು. ನಂತರ ಪ್ರಪಂಚದಾದ್ಯಂತ ಜನರು ಅಮರ ಜೆಲ್ಲಿ ಫಿಶ್ಗಳ ಬಗ್ಗೆ ತಿಳಿದುಕೊಂಡರು.
ಅಮರ ಜೆಲ್ಲಿ ಫಿಶ್ ಎಂದಾದರೂ ಸಾಯಬಹುದೇ?: ವಿಶಿಷ್ಟ ಜಾತಿಯ ಜೆಲ್ಲಿ ಫಿಶ್ಗಳು ಖಂಡಿತವಾಗಿಯೂ ಮಾರಕವಾಗಬಹುದು. ಆದರೆ ಪರಿಸ್ಥಿತಿ ಯಾವಾಗಲೂ ಒಂದೇ ಆಗಿರುವುದಿಲ್ಲ. ಅಮರ ಜೆಲ್ಲಿ ಫಿಶ್ಗಳೂ ಸಹ ಸಾಯಲು ಕಾರಣವಾಗುವ ಸಂದರ್ಭಗಳಿವೆ. ಉದಾಹರಣೆಗೆ, ಈ ಜಾತಿಯ ದೊಡ್ಡ ಮೀನುಗಳು ಅಥವಾ ಸಮುದ್ರ ಆಮೆಗಳಂತಹ ಇತರ ಜೀವಿಗಳಿಗೆ ಆಹಾರವಾದರೆ ಅವು ಸಾವನ್ನು ಎದುರಿಸಲೇಬೇಕಾಗುತ್ತದೆ.
ಟರ್ರಿಟೋಪ್ಸಿಸ್ ಡೊಹ್ರ್ನಿ ಜೆಲ್ಲಿ ಫಿಶ್ (Photo Credit: G3) ಆದರೆ, ಈ ಜಾತಿಯ ಜೆಲ್ಲಿ ಮೀನುಗಳು ಎಷ್ಟು ಕಾಲ ಬದುಕಬಲ್ಲವು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಸಾಧ್ಯ. ಏಕೆಂದರೆ ಆಳ ಸಮುದ್ರದಲ್ಲಿ ಸಂಶೋಧನೆ ನಡೆಸಲು ಬಹಳ ಸಮಯ ಬೇಕು. ಸಾಗರ ಮತ್ತು ಅದರ ಭೂದೃಶ್ಯ ಕಾಲಾನಂತರದಲ್ಲಿ ಬದಲಾಗುತ್ತದೆ. ಮತ್ತೊಂದೆಡೆ, ಇದು ಸೂಕ್ಷ್ಮ ಅಥವಾ ತುಂಬಾ ಚಿಕ್ಕ ವಸ್ತುವಾಗಿರುವುದರಿಂದ ಅದನ್ನು ಸಂಶೋಧನೆಗಾಗಿ ಪ್ರಯೋಗಾಲಯಕ್ಕೆ ತರಲು ಸಾಧ್ಯವಿಲ್ಲ. ಆದರೆ ಸವಾಲುಗಳ ನಡುವೆ ಒಬ್ಬ ವಿಜ್ಞಾನಿ ಜೆಲ್ಲಿ ಫಿಶ್‌ಗಳನ್ನು ಸಂಶೋಧಿಸಿ ದೀರ್ಘಕಾಲೀನ ಯಶಸ್ಸು ಸಾಧಿಸಿದ್ದಾರೆ.
ಜಪಾನಿನ ವಿಜ್ಞಾನಿ ಶಿನ್ ಕುಬೋಟಾ 1990ರಲ್ಲಿ ಅಮರ ಜೆಲ್ಲಿ ಫಿಶ್‌ಗಳನ್ನು ಕಂಡುಹಿಡಿದರು. ಅವರು ಕೆಲವು ಜೆಲ್ಲಿ ಫಿಶ್‌ಗಳನ್ನು ತಂದು ತನ್ನ ಪ್ರಯೋಗಾಲಯದಲ್ಲಿ ಇಟ್ಟುಕೊಂಡು ಸೂಕ್ಷ್ಮವಾಗಿ ಗಮನಿಸತೊಡಗಿದರು. ಸುಮಾರು 2 ವರ್ಷಗಳ ಸಂಶೋಧನೆಯ ನಂತರ ಜೆಲ್ಲಿ ಫಿಶ್ಗಳು ಈ ಅವಧಿಯಲ್ಲಿ ಸ್ವಾಭಾವಿಕವಾಗಿ ತಮ್ಮ ಯೌವನದ ಸ್ಥಿತಿಗೆ ಮರಳಬಹುದು ಎಂಬುದು ಅವರು ಗಮನಕ್ಕೆ ಬಂತು. ಈ ಅವಧಿಯಲ್ಲಿ ಅವರು ಸುಮಾರು 10 ಬಾರಿ ಜೆಲ್ಲಿ ಫಿಶ್ಗಳು ಮತ್ತೆ ಯವೌನ ಸ್ಥಿತಿಗೆ ಮರಳಿರುವುದನ್ನು ಪತ್ತೆ ಹಚ್ಚಿದರು. ಇಂಥ ಜಾತಿಯ ಕೆಲವು ಜೆಲ್ಲಿ ಫಿಶ್ಗಳು ಒಂದು ತಿಂಗಳೊಳಗೆ ತಮ್ಮ ಯೌವನದ ಸ್ಥಿತಿಗೆ ಮರಳುತ್ತಿರುವುದು ಅವರು ಅರಿತರು.
ಹಾಗಾದರೆ, ಅಮರ ಜೆಲ್ಲಿ ಫಿಶ್ಗಳು ಕಂಡುಬರುವುದು ಎಲ್ಲಿ?:ಅಮರ ಜೆಲ್ಲಿ ಫಿಶ್ ಮೆಡಿಟರೇನಿಯನ್ ಸಮುದ್ರದಲ್ಲಿ ಹೆಚ್ಚು. ಆದರೆ ಈಗ ಇವುಗಳನ್ನು ಪ್ರಪಂಚದಾದ್ಯಂತ ಸಮುದ್ರಗಳು ಮತ್ತು ಸಾಗರಗಳಲ್ಲಿ ಕಾಣಬಹುದು. ಅಮರ ಜೆಲ್ಲಿ ಫಿಶ್ಗಳು ಸಾಮಾನ್ಯವಾಗಿ ಅಗೋಚರವಾಗಿರುತ್ತವೆ ಅಥವಾ ಸುಮಾರು 4.5 ಮಿಲಿಮೀಟರ್ ಗಾತ್ರದಲ್ಲಿರುತ್ತವೆ (ನಿಮ್ಮ ಕಿರುಬೆರಳಿಗಿಂತ ಚಿಕ್ಕದು). ಅವುಗಳನ್ನು ಗುರುತಿಸುವುದು ಕಷ್ಟ. ಜೆಲ್ಲಿ ಫಿಶ್ಗಳು ಜಗತ್ತಿನಲ್ಲಿ ಎಲ್ಲಿ ವಾಸಿಸುತ್ತವೆ ಎಂಬುದರ ಆಧಾರದ ಮೇಲೆ ಅವು ತಮ್ಮ ಗುಣಲಕ್ಷಣಗಳನ್ನು ಬದಲಾಯಿಸುತ್ತವೆ. ಅಂದರೆ, ಮಧ್ಯ ಅಮೆರಿಕದ ಪನಾಮದ ಉಷ್ಣವಲಯದ ನೀರಿನಲ್ಲಿ ಕಂಡುಬರುವ ಜೆಲ್ಲಿ ಫಿಶ್ಗಳು 8 ಗ್ರಹಣಾಂಗಗಳನ್ನು ಅಥವಾ ಚಾಚಿಕೊಂಡಿರುವ ಬಾಲಗಳನ್ನು ಹೊಂದಿವೆ. ಆದರೆ ಜಪಾನ್ ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿ ಕಂಡುಬರುವ ಜಾತಿಗಳು 24ಕ್ಕೂ ಹೆಚ್ಚು ಗ್ರಹಣಾಂಗಗಳನ್ನು ಹೊಂದಿವೆ. ಇದು ಏಕೆ ಹೀಗೆ ಎಂಬುದನ್ನು ಸದ್ಯ ಉತ್ತರವಿಲ್ಲ.
ಟರ್ರಿಟೋಪ್ಸಿಸ್ ಡೊಹ್ರ್ನಿ ಜೆಲ್ಲಿ ಫಿಶ್ (Photo Credit: Natural History Museum) ಈ ಮೀನುಗಳು ಮನುಷ್ಯರಿಗೆ ಅಪಾಯಕಾರಿಯೇ?: ಎಲ್ಲಾ ಜಾತಿಯ ಜೆಲ್ಲಿ ಫಿಶ್ಗಳು ವಿಷಕಾರಿಯಲ್ಲ. ಆದರೆ ಕೆಲವು ಜೆಲ್ಲಿ ಫಿಶ್ಗಳು ಮನುಷ್ಯರ ಸಂಪರ್ಕಕ್ಕೆ ಬಂದಾಗ ಕಚ್ಚುತ್ತವೆ. ಇದರಿಂದಾಗಿ ಮಾನವ ದೇಹಕ್ಕೆ ಅಸಹನೀಯ ನೋವುಂಟಾಗುತ್ತದೆ. ಈ ನಿರ್ದಿಷ್ಟ ಜೆಲ್ಲಿ ಫಿಶ್ಗಳಲ್ಲಿ ಒಂದು ಆಸ್ಟ್ರೇಲಿಯನ್ ಬಾಕ್ಸ್ ಜೆಲ್ಲಿ ಫಿಶ್. ಇದು ಬಹಳ ಅಪಾಯಕಾರಿ. ಇವು ಕಚ್ಚಿದ ನಂತರ ಮಾನವ ದೇಹಕ್ಕೆ ವಿಷ ಬಿಡುಗಡೆ ಮಾಡುತ್ತದೆ. ಮಾನವನ ಸಾವಿಗೂ ಕಾರಣವಾಗಬಹುದು. ಜನರು ಸಮುದ್ರದಲ್ಲಿ ಈಜುವಾಗ/ಕಡಲತೀರದಲ್ಲಿ ಸ್ನಾನ ಮಾಡುವಾಗ ಜೆಲ್ಲಿ ಮೀನುಗಳ ಸಂಪರ್ಕಕ್ಕೆ ಬರುತ್ತಾರೆ. ಆದರೆ ಅಮರ ಜೆಲ್ಲಿ ಫಿಶ್ಗಳು ಮನುಷ್ಯರಿಗೆ ಅಪಾಯ ಉಂಟುಮಾಡುವುದಿಲ್ಲ ಎಂಬುದನ್ನು ಸಂಶೋಧನೆ ಹೇಳುತ್ತದೆ. ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ದೊಡ್ಡ ಜೀವಿಗಳನ್ನು ಕಚ್ಚುವ ಸಾಮರ್ಥ್ಯ ಇದಕ್ಕಿಲ್ಲ. ಒಂದು ವೇಳೆ ಅಮರ ಜೆಲ್ಲಿ ಫಿಶ್ ಕಚ್ಚಿದರೂ ಯಾವುದೇ ಅಪಾಯವಾಗದು, ನೋವು ಸಹ ಇರುವುದಿಲ್ಲ ಎಂಬುದು ಸಂಶೋಧಕರ ಮಾತು.
ಇದನ್ನೂ ಓದಿ:ತ್ರೀ-ಇನ್-ಒನ್ ಹೈಬ್ರಿಡ್ ಬೈಸಿಕಲ್ ವಿನ್ಯಾಸ: ಅನಾರೋಗ್ಯದ ನಡುವೆ ನಾವೀನ್ಯತೆ ತೋರಿದ ಬಾಲಕನ ಸಾಧನೆಗೆ ಜನರು ಫಿದಾ
ಇದನ್ನೂ ಓದಿ:9ನೇ ಬಾರಿ ಬಾಹ್ಯಾಕಾಶ ನಡೆಗೆ ಕೈಗೊಂಡ ಸುನೀತಾ ವಿಲಿಯಮ್ಸ್ : ಇಲ್ಲಿದೆ ಲೈವ್ ಸ್ಟ್ರೀಮಿಂಗ್