ಕರ್ನಾಟಕ

karnataka

ETV Bharat / technology

ಅಮೆಜಾನ್​ ಪೇ, ಫೋನ್​ಪೆಗೆ ಪೈಪೋಟಿ: UPI ಇಂಟರ್​ಫೇಸ್​ ಆರಂಭಿಸಿದ ಫ್ಲಿಪ್​ಕಾರ್ಟ್

ಅಮೆಜಾನ್ ಪೇ ಮಾದರಿಯಲ್ಲಿ ಈಗ ಫ್ಲಿಪ್​ಕಾರ್ಟ್​ ಕೂಡ ತನ್ನದೇ ಆದ ಯುಪಿಐ ಪಾವತಿ ಇಂಟರ್​ ಫೇಸ್ ಆರಂಭಿಸಿದೆ.

Flipkart launches its own UPI service
Flipkart launches its own UPI service

By ETV Bharat Karnataka Team

Published : Mar 3, 2024, 12:24 PM IST

ನವದೆಹಲಿ: ಫ್ಲಿಪ್ ಕಾರ್ಟ್ ಈಗ ತನ್ನ ಸ್ವಂತದ ಯುಪಿಐ ಸೇವೆಯನ್ನು ಆರಂಭಿಸಿದೆ. ಫ್ಲಿಪ್ ಕಾರ್ಟ್​ನ ಹೊಸ ಯುನಿಫೈಡ್ ಪೇಮೆಂಟ್ಸ್ ಇಂಟರ್​ಫೇಸ್ ಮೂಲಕ ಬಳಕೆದಾರರು ಫ್ಲಿಪ್ ಕಾರ್ಟ್​ ಆ್ಯಪ್​ನ ಒಳಗೆ ಮತ್ತು ಹೊರಗೆ ಆನ್​ಲೈನ್ ಮತ್ತು ಆಫ್​ಲೈನ್ ವಿಧಾನದಲ್ಲಿ ಹಣ ಪಾವತಿ ಮಾಡಬಹುದು. ಆಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಆರಂಭವಾಗಿರುವ ಈ ಸೇವೆಯು ಆರಂಭದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರುತ್ತದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮತ್ತು ಅಮೆಜಾನ್ ಪೇ ನಂತಹ ಥರ್ಡ್ ಪಾರ್ಟಿ ಯುಪಿಐ ಅಪ್ಲಿಕೇಶನ್​​ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಫ್ಲಿಪ್ ಕಾರ್ಟ್ ತನ್ನದೇ ಆದ ಯುಪಿಐ ಸೇವೆ ಜಾರಿಗೊಳಿಸಿದೆ.

"ಬದಲಾಗುತ್ತಿರುವ ಡಿಜಿಟಲ್ ವ್ಯವಸ್ಥೆಯನ್ನು ಗುರುತಿಸಿ, ಫ್ಲಿಪ್ ಕಾರ್ಟ್ ಯುಪಿಐ ಸೇವೆಯು ಯುಪಿಐನ ಅನುಕೂಲತೆ ಮತ್ತು ವೆಚ್ಚ ಕಡಿತವನ್ನು ಸೂಕ್ತವಾಗಿ ವಿಲೀನಗೊಳಿಸುತ್ತದೆ" ಎಂದು ಫ್ಲಿಪ್ ಕಾರ್ಟ್​ನ ಫಿನ್ ಟೆಕ್ ಮತ್ತು ಪಾವತಿ ಸಮೂಹದ ಹಿರಿಯ ಉಪಾಧ್ಯಕ್ಷ ಧೀರಜ್ ಅನೇಜಾ ಹೇಳಿದರು.

ಬಳಕೆ ಹೇಗೆ?: ಫ್ಲಿಪ್​ಕಾರ್ಟ್​ ತನ್ನ ಪ್ಲಾಟ್​ಫಾರ್ಮ್​​ನಲ್ಲಿ 50 ಕೋಟಿ ನೋಂದಾಯಿತ ಬಳಕೆದಾರರು ಮತ್ತು 14 ಲಕ್ಷ ಮಾರಾಟಗಾರರನ್ನು ಹೊಂದಿದೆ ಎಂದು ವರದಿಯಾಗಿದೆ. ಗ್ರಾಹಕರು ಫ್ಲಿಪ್ ಕಾರ್ಟ್ ಅಪ್ಲಿಕೇಶನ್​ನಲ್ಲಿ ಯುಪಿಐ ಐಡಿಯನ್ನು ರಚಿಸಿ ವ್ಯಾಪಾರಿಗಳು ಮತ್ತು ವ್ಯಕ್ತಿಗಳಿಗೆ ಪಾವತಿ ಮಾಡಬಹುದು ಮತ್ತು ಅಪ್ಲಿಕೇಶನ್​​ಗಳನ್ನು ಬದಲಾಯಿಸದೆ ಬಿಲ್​​ಗಳನ್ನು ಪಾವತಿಸಬಹುದು.

ಫ್ಲಿಪ್​ಕಾರ್ಟ್​ನ ಆಂತರಿಕ ಯುಪಿಐ ಸೇವೆಯನ್ನು ಮಿಂತ್ರಾ, ಫ್ಲಿಪ್ ಕಾರ್ಟ್ ಹೋಲ್ ಸೇಲ್, ಫ್ಲಿಪ್ ಕಾರ್ಟ್ ಹೆಲ್ತ್ + ಮತ್ತು ಕ್ಲಿಯರ್ ಟ್ರಿಪ್ ಸೇರಿದಂತೆ ಫ್ಲಿಪ್ ಕಾರ್ಟ್ ಗ್ರೂಪ್ ಕಂಪನಿಗಳ ಪ್ಲಾಟ್​ಫಾರ್ಮ್​ಗಳಲ್ಲಿ ಕೂಡ ಸುಲಭವಾಗಿ ಬಳಸಬಹುದು.

"ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಯುಪಿಐನ ಬಹು ಪಾವತಿ ಸೌಲಭ್ಯವನ್ನು ವಿಸ್ತರಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ. ಪಾಲುದಾರಿಕೆ ಮತ್ತು ಆವಿಷ್ಕಾರಗಳೊಂದಿಗೆ ಯುಪಿಐನಲ್ಲಿ ನಮ್ಮ ಬೆಳವಣಿಗೆಯನ್ನು ಮುಂದುವರಿಸುತ್ತೇವೆ. ಫ್ಲಿಪ್ ಕಾರ್ಟ್​ನೊಂದಿಗಿನ ನಮ್ಮ ಸಹಭಾಗಿತ್ವದಲ್ಲಿ ಭಾರತದ ಅತ್ಯಂತ ಯಶಸ್ವಿ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್​ ಸೇವೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈಗ ಫ್ಲಿಪ್​ಕಾರ್ಟ್​ನೊಂದಿಗೆ ಯುಪಿಐ ಸೇವೆಯನ್ನು ಪ್ರಾರಂಭಿಸುವ ಮೂಲಕ ನಮ್ಮ ಸಹಯೋಗ ಬಹುದೂರ ಸಾಗಿ ಬಂದಿದೆ" ಎಂದು ಆಕ್ಸಿಸ್ ಬ್ಯಾಂಕಿನ ಕಾರ್ಡ್ಸ್ ಮತ್ತು ಪಾವತಿಗಳ ಅಧ್ಯಕ್ಷ ಮತ್ತು ಮುಖ್ಯಸ್ಥ ಸಂಜೀವ್ ಮೊಘೆ ಹೇಳಿದರು.

ಇದನ್ನೂ ಓದಿ : ಫೇಸ್​ಬುಕ್​ & ಇನ್​ಸ್ಟಾದಲ್ಲಿನ 2 ಕೋಟಿ 20 ಲಕ್ಷ ಆಕ್ಷೇಪಾರ್ಹ ಪೋಸ್ಟ್​ ಡಿಲೀಟ್ ಮಾಡಿದ ಮೆಟಾ

ABOUT THE AUTHOR

...view details