ಹೈದರಾಬಾದ್ (ತೆಲಂಗಾಣ) : ಹೆಂಡತಿಯ ಮೇಲಿನ ಅನುಮಾನದಿಂದ ವ್ಯಕ್ತಿಯೊಬ್ಬ ಹೀನ ಕೃತ್ಯ ಎಸಗಿದ್ದು, ಪರಿಣಾಮ ತಾಯಿಯ ಜೊತೆ ಆಕೆಯ ಗರ್ಭದಲ್ಲಿದ್ದ ಶಿಶು ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿನ ಕುಶಾಯಿಗುಡ ಪೊಲೀಸ್ ಠಾಣೆ ವ್ಯಕ್ತಿಯಲ್ಲಿ ನಡೆದಿದೆ.
ಆರೋಪಿಯಾಗಿರುವ ಕಾಚಿಗುಡ ಮೂಲದ ಅತಿಪಮುಲ ಸಚಿನ್ ಸತ್ಯನಾರಾಯಣ (21), ಕಪ್ರಾ ಮೂಲದ ಸ್ನೇಹ (21) 2022ರಲ್ಲಿ ಇನ್ಸ್ಟಾಗ್ರಾಂ ಮೂಲಕ ಪರಸ್ಪರ ಪರಿಚಯವಾಗಿ, ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಫುಡ್ ಡೆಲಿವರಿ ಏಜೆಂಟ್ ಆಗಿ ಸಚಿನ್ ಕಾರ್ಯ ನಿರ್ವಹಿಸುತ್ತಿದ್ದ. ಈ ದಂಪತಿಗೆ 2023ರಲ್ಲಿ ಮಗುವಿನ ಆಗಮನದ ಮೂಲಕ ಪೋಷಕರಾಗಿ ಬಡ್ತಿ ಪಡೆದರು. ಚೆನ್ನಾಗಿಯೇ ಇದ್ದ ಇವರ ಕುಟುಂಬದಲ್ಲಿ ಸಮಸ್ಯೆ ಆರಂಭವಾಗಿದ್ದು ಸಚಿನ್ ಉದ್ಯೋಗ ತೊರೆದ ಬಳಿಕ. ಕೆಲಸ ಬಿಟ್ಟ ಈತ ಅಕ್ರಮ ಚಟುವಟಿಕೆಯಲ್ಲಿ ನಿರತನಾಗುವ ಮೂಲಕ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಾರಣನಾಗಿದ್ದಾನೆ ಎಂದು ವರದಿಯಾಗಿದೆ.
ಮಗುವಿನ ಮಾರಾಟಕ್ಕೂ ಯತ್ನ : ಆರ್ಥಿಕ ಸಂಕಷ್ಟದ ಹಿನ್ನೆಲೆ ಸಚಿನ್ ತನ್ನ ಮಗುವನ್ನು 1 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸಿದ್ದ. ಇದರಿಂದ ಕುಪಿತಗೊಂಡ ಸ್ನೇಹ ಕುಶಾಯಿಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಈ ಮಗು ಕೆಲ ದಿನದಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಬಳಿಕ ಇಬ್ಬರ ನಡುವೆ ಗಲಾಟೆ ನಡೆದು ಪರಸ್ಪರ ಬೇರೆಯಾದರು. 2024ರ ಡಿಸೆಂಬರ್ನಲ್ಲಿ ಮತ್ತೆ ಒಂದಾದ ಇಬ್ಬರು ಕಪ್ರಾದಲ್ಲಿ ಬಾಡಿಗೆ ಮನೆ ಮಾಡಿ, ಒಟ್ಟಿಗೆ ಜೀವನ ನಡೆಸಲು ಮುಂದಾದರು. ಸಚಿನ್ ಜೊತೆಗೆ ಮರಳಿದಾಗ ಸ್ನೇಹ 7 ತಿಂಗಳ ಗರ್ಭಿಣಿಯಾಗಿದ್ದರು. ಇದು ಇವರ ಸಂಬಂಧ ಗಟ್ಟಿಗೊಳಿಸುವ ಬದಲು ಮತ್ತಷ್ಟು ಸಮಸ್ಯೆಗೆ ಕಾರಣವಾಯಿತು.
ಕ್ರೂರವಾಗಿ ಕೊಲೆ : ಸ್ನೇಹ ಗರ್ಭಿಣಿಯಾದ ಬಗ್ಗೆ ಸಚಿನ್ ಅನುಮಾನ ಹೊಂದಿದ್ದು, ಕೊಲೆಗೆ ಕಾರಣವಾಗಿದೆ. ಜನವರಿ 15ರಂದು ಈತ ಮದ್ಯ ಸೇವಿಸಿ ಬಂದು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದರಿಂದಾಗಿ ತಾಯಿ ಜೊತೆಗೆ ಭ್ರೂಣದಲ್ಲಿದ್ದ ಶಿಶು ಸಹ ಸಾವನ್ನಪ್ಪಿದೆ. ಈ ಅಪರಾಧವನ್ನು ಮುಚ್ಚಿ ಹಾಕಲು ಸಚಿನ್ ಇದನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ಇದಕ್ಕಾಗಿ ಗ್ಯಾಸ್ ಸಿಲಿಂಡರ್ ಪೈಪ್ ಅನ್ನು ಸೋರಿಕೆ ಮಾಡಿ, ಗ್ಯಾಸ್ ಸ್ಫೋಟದ ಕೃತ್ಯ ಎಂದು ಬಿಂಬಿಸಲು ಪ್ರಯತ್ನ ನಡೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಡೆಗೂ ಕೃತ್ಯ ಬಯಲಿಗೆ : ಜನವರಿ 18ರಂದು ಸಚಿನ್ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಪರಿಶೀಲನೆ ನಡೆಸಿದಾಗ ಸ್ನೇಹ ಶವ ಪತ್ತೆಯಾಗಿದೆ. ಬಳಿಕ ಸಚಿನ್ ಅನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿ, ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಗೆಳತಿಯ ವರಿಸಲು ಹಿಂದು ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವಕ