ಜಲ್ನಾ (ಮಹಾರಾಷ್ಟ್ರ): ಸೇತುವೆ ನಿರ್ಮಾಣ ಕಾಮಗಾರಿಗೆ ಬಂದಿದ್ದ ಕಾರ್ಮಿಕರು ಮಲಗಿದ್ದ ಶೆಡ್ ಮೇಲೆ ಟಿಪ್ಪರ್ ಲಾರಿಯೊಂದು ಮರಳು ಸುರಿದ ಪರಿಣಾಮ 17 ವರ್ಷದ ಬಾಲಕ ಸೇರಿದಂತೆ ಐವರು ಕಾರ್ಮಿಕರು ಮರಳಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಜಲ್ನಾ ಜಿಲ್ಲೆಯ ಪಸೋಡಿ ಶಿವರಾತ್ನಲ್ಲಿ ನಡೆದಿದೆ. ಶನಿವಾರ ಬೆಳಗಿನ ಜಾವ 3.30ಕ್ಕೆ ಜಾಫ್ರಾಬಾದ್ ತಾಲೂಕಿನ ಪಸೋಡಿ- ಚಂದೋಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಫ್ರಾಬಾದ್ ತಾಲೂಕಿನ ಪಸೋಡಿ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕಾರ್ಮಿಕರು ಬಂದಿದ್ದರು. ಸೇತುವೆ ನಿರ್ಮಾಣ ಸ್ಥಳದ ಬಳಿಯ ಶೀಟ್ ಮೆಟಲ್ ಶೆಡ್ನಲ್ಲಿ ಕಾರ್ಮಿಕರು ಮಲಗಿದ್ದರು.
ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ಮರಳು ಹೊತ್ತು ಬಂದ ಟಿಪ್ಪರ್ ಚಾಲಕ ಶೆಡ್ ಮೇಲೆ ಮರಳು ಸುರಿದಿದ್ದಾನೆ. ಪರಿಣಾಮ ಶೆಡ್ನಲ್ಲಿ ಮಲಗಿದ್ದ 6 ಮಂದಿ ಮರಳಿನೊಳಗೆ ಸಿಲುಕಿಕೊಂಡಿದ್ದಾರೆ. ಶೆಡ್ನ ಮುಂಭಾಗದಲ್ಲಿ ಮಲಗಿದ್ದ ಮಹಿಳೆಯೊಬ್ಬರು ಅದನ್ನು ಗಮನಿಸಿ ಕಿರುಚಿಕೊಂಡಿದ್ದಾರೆ. ಇದನ್ನು ಕಂಡ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ಮಹಿಳೆ ಹತ್ತಿರದ ದನದ ಕೊಟ್ಟಿಗೆಗೆ ಹೋಗಿ ರೈತರನ್ನು ಕರೆದು, ಅವರು ಮರಳನ್ನು ತೆಗೆದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ 6 ಮಂದಿಯಲ್ಲಿ 5 ಮಂದಿ ಜೀವಂತ ಸಮಾಧಿಯಾಗಿದ್ದು, 12 ವರ್ಷದ ಬಾಲಕಿಯೊಬ್ಬಳನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶೆಡ್ನಲ್ಲಿ ಕಾರ್ಮಿಕರು ಮಲಗಿರುವ ಬಗ್ಗೆ ಟಿಪ್ಪರ್ ಚಾಲಕನಿಗೆ ತಿಳಿದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಮೃತರನ್ನು ಸಿಲ್ಲೋಡ್ ತೆಹಸಿಲ್‌ನ ಗೋಲೆಗಾಂವ್ ನಿವಾಸಿಗಳಾದ ಗಣೇಶ್ ಕಾಶಿನಾಥ್ ಧನ್ವಾಯಿ (50), ಅವರ ಮಗ ಭೂಷಣ್ ಧನ್ವಾಯಿ (17), ಬುಲ್ಧಾನ ದಾಹಿದ್ ನಿವಾಸಿ ರಾಜೇಂದ್ರ ದಗ್ದುಬಾ ವಾಘ್ (40), ಭೋಕರ್ದನ್ ತೆಹ್ಸಿಲ್ನ ಪದ್ಮಾವತಿ ಗ್ರಾಮದ ನಿವಾಸಿ ಸುನಿಲ್ ಸಮಧಾನ್ ಸಪ್ಕಲ್ (20), ಜಮ್ನೆರ್ನ ತೊಂಡಾಪುರದ ನಿವಾಸಿ ಸುಪ್ಡು ಅಹೆರ್ (38) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಪರಸ್ಪರ ಹತ್ತಿರದ ಸಂಬಂಧಿಕರಾಗಿದ್ದಾರೆ
ಗುತ್ತಿಗೆದಾರ ಕಾಮಗಾರಿಗೆ ಅಗ್ಗದ ಮರಳು ಪಡೆಯಲು ರಾತ್ರಿ ವೇಳೆ ಅಕ್ರಮವಾಗಿ ಮರಳು ತಂದು ಇಲ್ಲಿ ಸಂಗ್ರಹಿಸುತ್ತಿದ್ದ ಎನ್ನಲಾಗಿದೆ. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಐದು ಜನರು ಜೀವ ಕಳೆದುಕೊಳ್ಳುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ಜಾಫ್ರಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇಂಗಲ್ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದಾಗ, ಸ್ಥಳೀಯ ಗ್ರಾಮಸ್ಥರು ಪಂಚನಾಮೆ ನಡೆಸದೇ ಶವಗಳನ್ನು ವಶಕ್ಕೆ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಗ್ರಾಮಸ್ಥರು ವಿರೋಧದ ನಂತರ, ಜಾಫ್ರಾಬಾದ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ವಿ. ಇಂಗಲ್ ತಮ್ಮ ತಂಡಕ್ಕೆ ಪಂಚನಾಮೆಯನ್ನು ನಡೆಸಲು ಸೂಚಿಸಿದರು. ಮತ್ತು ಮರಳು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಆರೋಪಿಸಿದ ಕಾರಣ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಖಾಸಗಿ ಬಸ್-ಟ್ರಕ್ ನಡುವೆ ಭೀಕರ ಅಪಘಾತ: ಐವರು ಸ್ಥಳದಲ್ಲೇ ಸಾವು