IND vs PAK: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಭಾಗವಾಗಿ ಗುರುವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಜಯಭೇರಿ ಭಾರಿಸಿರುವುದು ಗೊತ್ತೇ ಇದೆ. ಇದೀಗ ಭಾನುವಾರ (ನಾಳೆ) ಪಾಕ್ ವಿರುದ್ಧ ಕಾಳಗಕ್ಕೆ ಇಳಿಯಲಿದೆ.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿರುವ ರೋಹಿತ್ ಸೈನ್ಯ ಇದೀಗ ಪಾಕ್ ವಿರುದ್ಧದ ಪಂದ್ಯದಲ್ಲೂ ಅದೇ ಫಾರ್ಮ್ ಮುಂದುವರೆಸಿ ಗೆಲುವು ಸಾಧಿಸಲು ಯೋಜನೆ ರೂಪಿಸಿಕೊಂಡಿದೆ. ಆದರೆ, ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಲು ಭಾರತ ನಿರ್ಧರಿಸಿದೆ.
ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಅಂತಿಮ ಪಂದ್ಯದಲ್ಲಿ ಪಾಕ್ ವಿರುದ್ಧ ಸೋಲು ಕಂಡಿದ್ದ ಭಾರತ ಈ ಪಂದ್ಯದಲ್ಲಿ ಗೆದ್ದು ಸೇಡು ತೀರಿಸಿಕೊಳ್ಳಲು ಯೋಜನೆ ರೂಪಿಸಿಕೊಂಡಿದೆ. ಅದಕ್ಕಾಗಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ತಂಡದಲ್ಲಿ ಪ್ರಮುಖ ಬೌಲರ್ ಬದಲಾವಣೆ ಮಾಡುವ ಪ್ರಯೋಗಕ್ಕೆ ಮುಂದಾಗಿದೆ.
ಸ್ಟಾರ್ ಬೌಲರ್ ಕಳಪೆ ಫಾರ್ಮ್: ಹೌದು, ಸ್ಟಾರ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 2 ಪಂದ್ಯಗಳನ್ನು ಆಡಿದ್ದ ಕುಲ್ದೀಪ್ ಕೇವಲ 2 ವಿಕೆಟ್ ಪಡೆಯವಲ್ಲಿ ಮಾತ್ರ ಯಶಸ್ವಿ ಆಗಿದ್ದರು. ಅಲ್ಲದೇ ಬಾಂಗ್ಲಾ ವಿರುದ್ಧ ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.
ಮಿಸ್ಟರಿ ಸ್ಪಿನ್ನರ್ ಕಣಕ್ಕೆ: ಇದೀಗ ಪಾಕ್ ವಿರುದ್ಧ ಪಂದ್ಯ ಗೆಲ್ಲಲೇಬೇಕು ಎಂಬ ಯೋಜನೆ ರೂಪಿಸಿರುವ ಭಾರತ ಕುಲ್ದೀಪ್ ಬದಲಿಗೆ ಅವರ ಸ್ಥಾನಕ್ಕೆ ವರುಣ್ ಚಕ್ರವರ್ತಿ ಅವರನ್ನು ಕರೆತರಲು ಪ್ಲಾನ್ ರೂಪಿಸಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವರುಣ್ 5 ಪಂದ್ಯಗಳಿಂದ 14 ವಿಕೆಟ್ ಪಡೆದಿದ್ದರು. ನಂತರ ಏರಡನೇ ಏಕದಿನ ಪಂದ್ಯದಲ್ಲೂ ಬೌಲಿಂಗ್ ಮಾಡಿ 1 ವಿಕೆಟ್ ಉರುಳಿಸಿದ್ದರು. ಈ ಹಿನ್ನೆಲೆ ಪಾಕ್ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.
ಸಂಭಾವ್ಯ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ / ಕುಲ್ದೀಪ್ ಯಾದವ್.
ಇದನ್ನೂ ಓದಿ: ಕೊಹ್ಲಿ ಸ್ಪಿನ್ ಬೌಲಿಂಗ್‌ಗೆ ಪರದಾಡುವುದೇಕೆ? ಹರ್ಭಜನ್ ಸಿಂಗ್ ಕೊಟ್ಟ ಉತ್ತರ ಇದು