ಜೈಪುರ (ರಾಜಸ್ಥಾನ) : ತಮ್ಮ ಮಕ್ಕಳ ಮದುವೆಯನ್ನು ಅವಿಸ್ಮರಣೀಯವಾಗಿಸಲು ಪೋಷಕರು ಏನೇನೋ ಕಸರತ್ತು ಮಾಡುತ್ತಾರೆ. ಪ್ರಖ್ಯಾತ ಸ್ಥಳಗಳಲ್ಲಿ ವಿವಾಹ ಆಯೋಜನೆ, ದೊಡ್ಡ ದೊಡ್ಡ ಗಿಫ್ಟ್ ನೀಡುವುದೆಲ್ಲಾ ಇರುತ್ತೆ. ಆದ್ರೆ ಇಲ್ಲೊಬ್ಬ ತಂದೆ ತನ್ನ ಪುತ್ರಿಯ ವಿವಾಹವನ್ನು ಅದ್ಧೂರಿಯಾಗಿ ನಡೆಸಿ, ಆಕೆ ಗಂಡನ ಮನೆಗೆ ತೆರಳುವಾಗ ಆಗಸದಲ್ಲಿ ಹಾರುವಂತೆ ಮಾಡಿದ್ದಾರೆ.
ಹೌದು, ವಿವಾಹದ ಬಳಿಕ ವಧು-ವರ ಇಬ್ಬರೂ ತಮ್ಮ ಮನೆಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದಾರೆ. ಇಲ್ಲಿನ ಕೊಲಾನಾ ವಾಯುನೆಲೆಯಲ್ಲಿ ಅವರನ್ನು ಹೆಲಿಕಾಪ್ಟರ್‌ನಲ್ಲಿ ಹತ್ತಿಸಿ ಕಳುಹಿಸಲಾಗಿದೆ. ಈ ಮೂಲಕ ಕುಟುಂಬಸ್ಥರು ಮಗಳ ವಿವಾಹವನ್ನು ಸ್ಮರಣೆಯಲ್ಲಿ ಉಳಿಯುವಂತೆ ಮಾಡಿದ್ದಾರೆ.
ರಾಜಸ್ಥಾನದ ಝಾಲಾವರ್‌ನ ಅರಿಹಂತ್ ನಗರದ ನಿವಾಸಿ ಸೀತಾರಾಮ್ ಚೌಧರಿ ಅವರು ತಮ್ಮ ಪುತ್ರಿ ಚಾಂದನಿಯ ವಿವಾಹವನ್ನು ಜೈಪುರದ ಚಿತ್ರಕೂಟದ ವೈಶಾಲಿ ನಗರದ ನಿವಾಸಿ ರಾಮ್ ಅವರ ಜೊತೆ ಮಾಡಿಕೊಟ್ಟಿದ್ದಾರೆ. ಎರಡೂ ಕುಟುಂಬಗಳು ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ವಿವಾಹದ ಜೊತೆಗೆ ಎಲ್ಲಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿವೆ. ಮಗಳು ಗಂಡನ ಮನೆಗೆ ಹೊರಡಲು ಸಿದ್ಧವಾಗಿದ್ದಾಗ ತಂದೆ ಎಲ್ಲರಿಗೆ ಅಚ್ಚರಿಯ ಕೊಡುಗೆ ನೀಡಿದ್ದಾರೆ.
ಅಳಿಯ- ಮಗಳಿಗೆ ವಿಶೇಷ ಹೆಲಿಕಾಪ್ಟರ್ : ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ತಂದೆ ಸೀತಾರಾಮ್ ಚೌಧರಿ ಅವರು, ವಿಶೇಷ ಹೆಲಿಕಾಪ್ಟರ್ ಆಯೋಜಿಸಿದ್ದಾರೆ. ಇಲ್ಲಿನ ಕೊಲಾನಾ ವಾಯುನೆಲೆಯಲ್ಲಿ ನೂತನ ದಂಪತಿಯನ್ನು ಹೊತ್ತೊಯ್ಯಲು ಹೆಲಿಕಾಪ್ಟರ್ ಬಂದಿಳಿದಿದೆ. ಇದು ಎರಡೂ ಕುಟುಂಬಗಳಿಗೆ ಅಚ್ಚರಿ ಮತ್ತು ಸಂತಸದ ಕ್ಷಣವಾಗಿತ್ತು.
ಕೊಲಾನ ವಾಯುನೆಲೆಯಲ್ಲಿ ಹೆಲಿಕಾಪ್ಟರ್ ಬಂದಿಳಿದ ಬಳಿಕ, ಕುಟುಂಬ ಸದಸ್ಯರು ರನ್‌ವೇಯಲ್ಲಿಯೇ ಗೀತೆಗಳಿಗೆ ಹಾಡಿ ಕುಣಿದಿದ್ದಾರೆ. ನಂತರ, ವಧು-ವರರನ್ನು ಹೆಲಿಕಾಪ್ಟರ್‌ನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಮಗಳ ಬೀಳ್ಕೊಡುಗೆಯನ್ನು ವಿಶಿಷ್ಟವಾಗಿಸಲು ಕಳೆದ ಒಂದು ತಿಂಗಳಿನಿಂದ ತಂದೆ ಸೀತಾರಾಮ್ ಅವರು ಸಕಲ ಸಿದ್ಧತೆ ಮಾಡಿದ್ದರು.
ಕೊಲಾನಾ ವಾಯುನೆಲೆಯಲ್ಲಿ ಹೆಲಿಕಾಪ್ಟರ್ ಇಳಿಸಲು ಲೋಕೋಪಯೋಗಿ, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಯಿಂದ ಅನುಮೋದನೆ ಪಡೆಯಲಾಗಿತ್ತು. ತಮ್ಮ ಮಗಳಿಗೆ ಇದು ನನ್ನ ಉಡುಗೊರೆಯೂ ಹೌದು ಎಂದು ತಂದೆ ಸೀತಾರಾಮ್ ಚೌಧರಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯ ಶೀಶ್ ಮಹಲ್ನಲ್ಲಿ ವಾಸ್ತವ್ಯಕ್ಕೆ ಸಿಎಂ ರೇಖಾ ಗುಪ್ತಾ ಹಿಂದೇಟು; ಬೇರೆ ನಿವಾಸಕ್ಕೆ ಹುಡುಕಾಟ