ನವದೆಹಲಿ : ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಸನಾತನ ಧರ್ಮದ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾ ಕುಂಭಮೇಳಕ್ಕೆ ವಿಶ್ವದ ಮೂಲೆಮೂಲೆಗಳಿಂದ ಭಕ್ತರು ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಆಗಮಿಸುತ್ತಿದ್ದಾರೆ. ಈವರೆಗೂ 59 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.
ಮಹಾರಾಷ್ಟ್ರದ ಕಂಟೆಂಟ್ ಕ್ರಿಯೇಟರ್ ದಿವ್ಯಾ ಫೋಫಾನಿ ಕುಂಭಮೇಳಕ್ಕೆ ತಾವು ಮುಂಬೈನಿಂದ ಬಂದ ರೀತಿ ಮತ್ತು ಹಾದಿಯ ನಡುವೆ ಜನರು ನೀಡಿದ ನೆರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಜನರಲ್ಲಿನ ಭಕ್ತಿ ಪರಾಕಾಷ್ಠೆಯನ್ನೂ ಅವರು ಹಾಡಿ ಹೊಗಳಿದ್ದಾರೆ.
ಮುಂಬೈ ಟು ಪ್ರಯಾಗ್‌ರಾಜ್ ಜರ್ನಿ : ಸಾಮಾಜಿಕ ಮಾಧ್ಯಮಗಳಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ದಿವ್ಯಾ ಫೋಫಾನಿ ಅವರು ಮುಂಬೈನಿಂದ ಪ್ರಯಾಗ್‌ರಾಜ್ ತಲುಪಲು ತಾನು ಏನೆಲ್ಲಾ ಮಾಡಿದೆ ಎಂಬ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಸ್ತಾರವಾದ ಪೋಸ್ಟ್ ಹಂಚಿಕೊಂಡಿದ್ದಾರೆ.
1500 ಕಿ.ಮೀ ದೂರವನ್ನು ಒಂದೇ ಒಂದು ರೂಪಾಯಿ ಖರ್ಚು ಮಾಡದೆ ತಲುಪಿದ್ದಾರೆ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ. ಫೆಬ್ರವರಿ 12 ರಂದು ಮುಂಬೈನಿಂದ ಪ್ರಯಾಣ ಆರಂಭಿಸಿ, ಎರಡು ದಿನಗಳ ನಂತರ ಪ್ರಯಾಗ್‌ರಾಜ್ ತಲುಪಿದೆ. ತಮ್ಮ ಈ ಪ್ರಯಾಣ ರೋಮಾಂಚಕ ಮತ್ತು ನಂಬಿಕೆ, ಸಾಹಸ ಮತ್ತು ಮಾನವ ದಯೆಯಿಂದ ಕೂಡಿತ್ತು ಎಂದು ಬಣ್ಣಿಸಿದ್ದಾರೆ.
ಸನಾತನಿಗಳ ಭಕ್ತಿ ಪರಾಕಾಷ್ಠೆ : ಮುಂಬೈನಿಂದ ಪ್ರಯಾಗ್ರಾಜ್ಗೆ ಪ್ರಯಾಣಿಸುವಾಗ, ಭಾರತೀಯರು ಪವಿತ್ರ ಸ್ಥಳವನ್ನು ತಲುಪಲು ಯಾವುದೇ ಹಿಂಜರಿಕೆಯಿಲ್ಲದೆ ಪರಸ್ಪರ ಸಹಾಯ ಮಾಡುತ್ತಾರೆ ಎಂಬುದನ್ನು ನಾನು ನೇರವಾಗಿ ಕಂಡೆ. ಈ ಪ್ರಯಾಣವು ಅಪರಿಚಿತರಲ್ಲಿನ ದಯೆ, ಕರುಣೆ, ಸಹಾಯಹಸ್ತ ಮತ್ತು ಏಕತೆಯ ಪ್ರತೀಕವಾಗಿತ್ತು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಲಿಫ್ಟ್' ಎಂದು ಬರೆದ ಫಲಕವನ್ನು ಹಿಡಿದುಕೊಂಡು, ಫೋಫಾನಿ ಮುಂಬೈನ ಉಪನಗರ ಥಾಣೆಯಿಂದ ನಾಗ್ಪುರಕ್ಕೆ ಬೈಕ್‌ಗಳು, ಸ್ಕೂಟರ್‌ಗಳು, ಕಾರುಗಳು ಮತ್ತು ಟ್ರಕ್‌ಗಳಲ್ಲಿ ಪ್ರಯಾಣಿಸಿದೆ. ಹೀಗೆಯೇ ಸುಮಾರು 1,500 ಕಿ.ಮೀ. ದೀರ್ಘ ಪ್ರಯಾಣವನ್ನು ಕ್ರಮಿಸಿದೆ. ಮಧ್ಯಪ್ರದೇಶಕ್ಕೆ ತಲುಪಿದ ಬಳಿಕ, ಜಬಲ್‌ಪುರದಿಂದ ಪ್ರಯಾಗ್‌ರಾಜ್ ಬರಲು ತುಸು ಕಷ್ಟಪಡಬೇಕಾಯಿತು. ಪ್ರಯಾಗ್‌ರಾಜ್‌ವರೆಗಿನ ಅಂತಿಮ ಪ್ರಯಾಣ ಅತ್ಯಂತ ಸವಾಲಿನದ್ದಾಗಿತ್ತು ಎಂದು ಹೇಳಿದ್ದಾರೆ.
ಜಬಲ್‌ಪುರದಿಂದ ಪ್ರಯಾಗ್‌ರಾಜ್‌ವರೆಗಿನ ಮಾರ್ಗದಲ್ಲಿ ಟ್ರಕ್‌ಗಳಿಗೆ ಅವಕಾಶವಿರಲಿಲ್ಲ. ಇದು ಪ್ರಯಾಣವನ್ನು ಕಷ್ಟಕರವಾಗಿಸಿತು. ಆದಾಗ್ಯೂ, ಸ್ಥಳೀಯರ ನೆರವಿನಿಂದ ಫೆಬ್ರವರಿ 15 ಕ್ಕೆ ಕುಂಭಮೇಳ ಸ್ಥಳವನ್ನು ನಯಾಪೈಸೆ ಖರ್ಚು ಮಾಡದೆ ತಲುಪಿದೆ ಎಂದು ಬರೆದುಕೊಂಡಿದ್ದಾರೆ. ಈ ಅದ್ಭುತ ಯಾತ್ರೆಯ ಕುರಿತು ಪೋಸ್ಟ್ 36 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಕಂಡಿದೆ.
45 ದಿನಗಳ ಈ ಮಹಾ ಕುಂಭವು ಜನವರಿ 13 ರಂದು ಪ್ರಾರಂಭವಾಗಿದ್ದು, ಫೆಬ್ರವರಿ 26 ರಂದು ಮಹಾಶಿವರಾತ್ರಿಯ ದಿನದಂದು ಕೊನೆಗೊಳ್ಳುತ್ತದೆ. ಉತ್ತರಪ್ರದೇಶ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ 59 ಕೋಟಿ ಜನರು ಗಂಗಾ, ಯಮುನಾ ಮತ್ತು ಸರಸ್ವತಿಯ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದಿದೆ.
ಇದನ್ನೂ ಓದಿ: ಮಹಾಕುಂಭದಲ್ಲಿ ಇವರೂ ಭಾಗಿ: 75 ಜೈಲಿನ ಖೈದಿಗಳಿಗೆ ಸಂಗಮ ನೀರಿನಲ್ಲಿ ಪವಿತ್ರ ಸ್ನಾನ