ಧಾರವಾಡ : "ಸಿದ್ದರಾಮಯ್ಯ ನಾಯಕತ್ವದಲ್ಲೇ ಮುಂದಿನ ಚುನಾವಣೆಗಳನ್ನು ಎದುರಿಸುವ ವಿಚಾರದ ತೀರ್ಮಾನವನ್ನು ದೆಹಲಿಯವರು ಮಾಡುತ್ತಾರೆ. ಯಾರ ನೇತೃತ್ವ, ಯಾರು ಸಾರಥಿ ಅಂತಾ ನಿರ್ಣಯ ದೆಹಲಿಯವರೇ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಗ್ಯಾರಂಟಿ ಯೋಜನೆಯನ್ನು ಟೀಕಿಸಿದ್ದರು. ದೆಹಲಿಯಲ್ಲಿ ಅವರೇ ಈಗ ಕೊಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಕೊಟ್ಟಿದಾರೆ. ಈ ಬಗ್ಗೆ ಪ್ರಲ್ಹಾದ್ ಜೋಶಿಯವರನ್ನೇ ಕೇಳಬೇಕು. ದೆಹಲಿಯಲ್ಲಿ ನಮಗಿಂತ 500 ರೂ. ಜಾಸ್ತಿ ಮಾಡಿದ್ದಾರೆ. ರಾಜಕೀಯಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಆದರೆ ಇದು ಒಳ್ಳೆಯ ಯೋಜನೆ, ಅದಕ್ಕಾಗಿ ಅವರೂ ಕೊಡುತ್ತಿದ್ದಾರೆ" ಎಂದು ಟಾಂಗ್ ನೀಡಿದರು.
ಡಿಕೆಶಿ ಮುಂದಿನ ಹತ್ತು ವರ್ಷ ನಾನೇ ನಾಯಕ ಎಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಅದನ್ನು ಹೈಕಮಾಂಡ್ ನಿರ್ಣಯ ಮಾಡುತ್ತದೆ. ನಿರ್ಧಾರ ಮಾಡುವ ಮಾಲೀಕರು ಯಾರು? ನಮ್ಮ ಮಾಲೀಕರು ದೆಹಲಿಯಲ್ಲಿ ಇದ್ದಾರೆ" ಎಂದರು.
ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆಗೆ ಪ್ರತಿಕ್ರಿಯೆ : "ಅದು ನಮಗೆ ಗೊತ್ತಿಲ್ಲ ಆ ಬಗ್ಗೆ ದೆಹಲಿಯವರನ್ನೇ ಕೇಳಬೇಕು. ಸದ್ಯ ದಲಿತ ಸಿಎಂ ಪ್ರಶ್ನೆ ಇಲ್ಲ. ಜಾರಕಿಹೊಳಿ ಸಿಎಂ ಎಂಬ ಚರ್ಚೆ ವಿಚಾರ ಅದು ನಮ್ಮ ಅಭಿಮಾನಿಗಳು ಹೇಳುತ್ತಾರೆ. ನಮ್ಮ ಅಭಿಮಾನಿಗಳಿಗೆ ನಾನು ಸಿಎಂ ಆಗಬೇಕೆಂಬ ಆಸೆ ಇದೆ. ಎಲ್ಲರಿಗೂ ಅಭಿಮಾನಿಗಳಿದ್ದಾರೆ. ಅವರವರ ಅಭಿಮಾನಿಗಳು ತಮ್ಮ ನಾಯಕರೇ ಸಿಎಂ ಆಗಲಿ ಅನ್ನುತ್ತಾರೆ ಎಂದು ಉತ್ತರಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರ : "ಆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ, ಆಕಾಂಕ್ಷಿ ಬಹಳ ಜನ ಇದ್ದಾರೆ. ಆದರೆ, ಸಂಪುಟ ವಿಸ್ತರಣೆ ಯಾವಾಗ ಅನ್ನೋದು ಗೊತ್ತಿಲ್ಲ. ಇವತ್ತು ಶಾಸಕ ಕೋನರಡ್ಡಿ ಬರ್ತಡೇ ಇದೆ. ಬರ್ತಡೇ ಜತೆ ವಿವಿಧ ಇಲಾಖೆಗಳ ಯೋಜನೆಗಳ ಪೂಜೆ ಆಗಿದೆ. ಇವತ್ತಿನಿಂದ ಅನೇಕ ಕಾಮಗಾರಿಗಳನ್ನು ಪ್ರಾರಂಭಿಸುತ್ತಿದ್ದಾರೆ. ನಮ್ಮ ಇಲಾಖೆ ಕಾಮಗಾರಿಗಳೂ ಇವೆ. ಈ ಭಾಗದ ಜನರ ಬಹು ದಿನಗಳ ರಸ್ತೆ ಬೇಡಿಕೆಗಳು ಇದ್ದವು, ಅವೆಲ್ಲವೂ ಈಡೇರುತ್ತಿವೆ. ಸರ್ಕಾರದ ಎಲ್ಲ ಯೋಜನೆ ಈ ಭಾಗಕ್ಕೆ ತರುವ ಪ್ರಯತ್ನ ಕೋನರಡ್ಡಿ ಮಾಡುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಲು ನಾನೂ ಬಂದಿದ್ದೇನೆ. ಈಗಾಗಲೇ 47 ಕೋಟಿ ರೂ. ನವಲಗುಂದ ಕ್ಷೇತ್ರಕ್ಕೆ ಕೊಟ್ಟಿದ್ದೇವೆ. ಈ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಇಷ್ಟಕ್ಕೆ ಸಮಸ್ಯೆ ಪರಿಹಾರ ಆಗಿಲ್ಲ. ಇನ್ನೂ ಬಹಳಷ್ಟು ಬೇಡಿಕೆಗಳು ಇವೆ ಮುಂದಿನ ಮೂರು ವರ್ಷದಲ್ಲಿ ಹಂತ ಹಂತವಾಗಿ ಈಡೇರಿಸುತ್ತೇವೆ" ಎಂದು ಜಾರಕಿಹೊಳಿ ಭರವಸೆ ನೀಡಿದರು.
ಬಳಿಕ ಧಾರವಾಡ ಕೈಗಾರಿಕೆಗೆ ಹಿಡಕಲ್ ಡ್ಯಾಮ್ ನೀರು ತರುವ ವಿಚಾರಕ್ಕೆ ಮಾತನಾಡಿ, "ಅದರ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಅದು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ವಿಚಾರ. ಬೆಂಗಳೂರಿನಲ್ಲಿ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡುತ್ತದೆ. ನೀರಿನ ಮಾರ್ಗ ಡೈವರ್ಟ್ ಮಾಡುತ್ತಿದ್ದಾರಾ ಗೊತ್ತಿಲ್ಲ. ಆದರೆ, ನೀರು ಒಯ್ಯುವ ವಿಚಾರ ಮಾತ್ರ ಗೊತ್ತು. ಈಗಾಗಲೇ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಶುರುವಾಗಿವೆ ಸರ್ಕಾರವೇ ಈ ಬಗ್ಗೆ ಬೆಳಕು ಚೆಲ್ಲಬೇಕು" ಎಂದರು.
ಕೊನೆಗೆ ಬಸ್ ನಿರ್ವಾಹಕನ ಮೇಲೆ ಮರಾಠಿಗರ ಹಲ್ಲೆಗೆ "ಈಗಾಗಲೇ ತನಿಖೆ ನಡೀತಾ ಇದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅದು ಏನಾಗುತ್ತೆ ಕಾದು ನೋಡೋಣ" ಎಂದು ಉತ್ತರಿಸಿದರು.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ ಸಂಬಂಧ ರಾಜ್ಯದಲ್ಲಿ 200 ಮಂದಿ ವಿದೇಶಿಗರ ಮೇಲೆ ಕ್ರಮ: ಪರಮೇಶ್ವರ್