ಬೆಳಗಾವಿ: ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲಿನ ಹಲ್ಲೆ ಆರೋಪ ಪ್ರಕರಣದಲ್ಲಿ ಒಂದೆಡೆ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದರೆ, ಮತ್ತೊಂದೆಡೆ ಹಲ್ಲೆಗೊಳಗಾದ ಕಂಡಕ್ಟರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವುದು ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಬಸ್ ಕಂಡಕ್ಟರ್ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ ಅವರ ಮೇಲೆ ನಿನ್ನೆ ಸಣ್ಣಬಾಳೇಕುಂದ್ರಿ ಗ್ರಾಮದ ಬಳಿ ಮರಾಠಿ ಮಾತನಾಡದೇ ಕನ್ನಡ ಮಾತನಾಡಿದ್ದಕ್ಕೆ 20ಕ್ಕೂ ಹೆಚ್ಚು ಜನರ ಗುಂಪು ಹಲ್ಲೆ ಮಾಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಬಸ್ ಚಾಲಕ ಕತಾಲ್ ಸಾಬ್ ಮೋಮಿನ್ ಶುಕ್ರವಾರ ರಾತ್ರಿ ಮಾರಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕನ್ನಡದಲ್ಲಿ ಮಾತನಾಡಿದ್ದಕ್ಕೆ ಗುಂಪುಗೂಡಿ ಹಲ್ಲೆ ಮಾಡಲಾಗಿದೆ ಎಂದು ಬಸ್ ಚಾಲಕ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಿನ್ನೆ ರಾತ್ರಿಯೇ ಓರ್ವ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಣ್ಣ ಬಾಳೇಕುಂದ್ರಿ ಗ್ರಾಮದ ಮಾರುತಿ ತುರುಮುರಿ, ರಾಹುಲ್ ರಾಜು ನಾಯ್ಡು, ಬಾಳು ಗೋಜಗೇಕರ್ ಬಂಧಿತ ವಯಸ್ಕರರು. ಆರೋಪಿಗಳನ್ನು ಹಿಂಡಲಗಾ ಜೈಲಿಗೆ ಮಾರಿಹಾಳ ಪೊಲೀಸರು ರವಾನಿಸಿದ್ದಾರೆ.
ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್: ಬಳಿಕ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಮತ್ತೊಂದು ತಿರುವು ಪಡೆದುಕೊಂಡಿದ್ದು, ಕಂಡಕ್ಟರ್ ವಿರುದ್ಧ ಅಪ್ರಾಪ್ತ ಬಾಲಕಿಯಿಂದ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಿಸಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೇ ಮಾರಿಹಾಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕನ್ನಡ ಪರ ಹೋರಾಟಗಾರರ ಪ್ರತಿಭಟನೆ: ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಾಗಿರುವುದು ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಪೋಕ್ಸೋ ಕೇಸ್ ವಜಾ ಮಾಡುವಂತೆ ಒತ್ತಾಯಿಸಿ ಮಾರಿಹಾಳ ಪೊಲೀಸ್ ಠಾಣೆ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಠಾಣೆಗೆ ಮುತ್ತಿಗೆ ಹಾಕಲು ಕರವೇ ಕಾರ್ಯಕರ್ತರು ಯತ್ನಿಸಿದರು.
ಹಲ್ಲೆ ಪ್ರಕರಣವನ್ನು ಮುಚ್ಚಿ ಹಾಕಲು ಕಂಡಕ್ಟರ್ ಮೇಲೆ ಈ ರೀತಿ ಪೋಕ್ಸೋ ಕೇಸ್ ಹಾಕಲಾಗಿದೆ. ಕಂಡಕ್ಟರ್ ನೆರವಿಗೆ ಬರಬೇಕಿದ್ದ ಪೊಲೀಸರು ಈ ರೀತಿ ವರ್ತಿಸಿದ್ದು ಸರಿಯಲ್ಲ. ಇಡೀ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಪ್ರಕರಣ ದಿಕ್ಕು ತಪ್ಪಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಏನಿದು ಪ್ರಕರಣ?: ಬೆಳಗಾವಿ - ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‌ನಲ್ಲಿ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಬಾಳೇಕುಂದ್ರಿಗೆ ಸಿಬಿಟಿಯಿಂದ ಹುಡುಗ ಮತ್ತು ಹುಡುಗಿ ಬಸ್ ಹತ್ತಿದ್ದರು. ಹುಡುಗಿಯು ಹುಡುಗನದ್ದೂ ಸೇರಿ ಎರಡು ಟಿಕೆಟ್ ಕೇಳಿ ಪಡೆದಿದ್ದಳು. ಮಹಿಳೆಯರಿಗೆ ಉಚಿತ ಟಿಕೆಟ್ ಇದ್ದುದರಿಂದ ನಿರ್ವಾಹಕ ಮಹಾದೇವ್ ಎರಡೂ ಉಚಿತ ಟಿಕೆಟ್ ನೀಡಿಬಿಟ್ಟಿದ್ದರು. ಬಳಿಕ ಇನ್ನೊಬ್ಬರು ಯಾರು ಅಂತ ಆ ಹುಡುಗಿಯನ್ನು ಕೇಳಿದಾಗ ಪಕ್ಕದಲ್ಲಿದ್ದ ಹುಡುಗನನ್ನು ತೋರಿಸಿದ್ದಳು. ಇದರಿಂದ ನಿರ್ವಾಹಕ ಮಹಾದೇವ್, ಹುಡುಗರಿಗೆ ಉಚಿತ ಟಿಕೆಟ್ ನೀಡಿದರೆ ನನ್ನನ್ನು ಸಸ್ಪೆಂಡ್ ಮಾಡುತ್ತಾರೆ, ಉಚಿತ ಟಿಕೆಟ್ ಹೆಣ್ಣು ಮಕ್ಕಳಿಗೆ ಮಾತ್ರ, ನೀವು ಟಿಕೆಟ್ ಪಡೆಯುವಾಗ ಸರಿಯಾಗಿ ಹೇಳಿ ತೆಗೆದುಕೊಳ್ಳಬೇಕು ಅಂತ ಹುಡುಗಿಗೆ ತಿಳಿ ಹೇಳಿದ್ದರು. ಅದಕ್ಕೆ ಆ ಯುವತಿ ಮರಾಠಿಯಲ್ಲಿ ಮಾತಾಡು, ಮರಾಠಿ ಕಲಿತುಕೊಳ್ಳಬೇಕು ಎಂದಿದ್ದಳು. ಮುಂದೆ ಬಸ್ ಸಣ್ಣಬಾಳೇಕುಂದ್ರಿ ಗ್ರಾಮ ತಲುಪಿದಾಗ ಬಾಲಕಿ ಊರಿನವರಿಗೆ ಘಟನೆ ಬಗ್ಗೆ ದೂರಿದರು. ಏಕಾಏಕಿ ಗುಂಪುಗೂಡಿದ ಜನ ಬಸ್ ಏರಿ ಚಾಲಕ ಹಾಗೂ ನಿರ್ವಾಹಕರನ್ನು ಥಳಿಸಿದರು ಎಂದು ದೂರಿನಲ್ಲಿ ಬಸ್ ಡ್ರೈವರ್ ಉಲ್ಲೇಖಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ: ಬಸ್ ನಿರ್ವಾಹಕನ ಮೇಲೆ ಮರಾಠಿಗರ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ ಘಟನೆ ಬಗ್ಗೆ ಈಗಾಗಲೇ ತನಿಖೆ ನಡೀತಾ ಇದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅದು ಏನಾಗುತ್ತೆ ಕಾದು ನೋಡೋಣ ಎಂದು ಹೇಳಿದ್ದಾರೆ.
ಪೊಲೀಸ್ ಆಯುಕ್ತರ ಮಾಹಿತಿ: ಬಾಳೇಕುಂದ್ರಿ ಗ್ರಾಮದಲ್ಲಿ ಪ್ರಯಾಣಿಕ ಮತ್ತು ಕಂಡಕ್ಟರ್ ನಡುವೆ ಜಗಳ ಆಗಿದೆ. ಇದೇ ವಿಚಾರಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆಯಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇವೆ. ನಾಲ್ಕು ಜನ ಆರೋಪಿಗಳನ್ನ ಬಂಧಿಸಿದ್ದೇವೆ. ಮೂರು ತಂಡಗಳನ್ನ ರಚನೆ ಮಾಡಿ ಓಡಿ ಹೋದವರಿಗೆ ಶೋಧ ನಡೆಸಿದ್ದೇವೆ. ಭಾಷಾ ವಿಚಾರಕ್ಕೆ ಗಲಾಟೆಯಾಗಿದೆ ಅನ್ನೋ ಮಾಹಿತಿ ಇದೆ. ಸದ್ಯ ಬಸ್ ಕಂಡಕ್ಟರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ.
ಪೋಕ್ಸೋ ಕೇಸ್ ದಾಖಲು ವಿಚಾರಕ್ಕೆ ಪ್ರತಿಕ್ರಿಯೆ: ಬಸ್ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲು ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಘಟನೆಗೆ ಸಂಬಂಧಿಸಿದಂತೆ ಒಂದು ಕೌಂಟರ್ ಕೇಸ್ ಕೂಡ ದಾಖಲಾಗಿದೆ. ಬಸ್ ಕಂಡಕ್ಟರ್ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಅಂತಾ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತ್ಯಾಂಶ ಏನಿದೆ ಎನ್ನುವುದನ್ನು ನಾವು ತನಿಖೆ ಮಾಡುತ್ತಿದ್ದೇವೆ. ಸೆಕ್ಷನ್ 12 ಪ್ರಕಾರ ಕೇಸ್ ಕೊಟ್ಟಿದ್ದಾರೆ. ತನಿಖೆಯಲ್ಲಿ ಸರಿಯಾದ ಮಾಹಿತಿ ಸಿಗುತ್ತದೆ. ಈ ಸಮಯದಲ್ಲಿದ್ದ ಬಸ್‌ನಲ್ಲಿ ಬೇರೆ ಪ್ರಯಾಣಿಕರ ಹೇಳಿಕೆ ಪಡೆಯುತ್ತೇವೆ. ಸುಳ್ಳು ಆರೋಪಗಳ ಕುರಿತು ಕೂಡ ತನಿಖೆ ಮಾಡುತ್ತೇವೆ. ನಾವು ಕೇಸ್ ತೆಗೆದುಕೊಳ್ಳದಿದ್ದರೆ ಅವರು ಬೇರೆ ಬೇರೆ ಕಡೆ ಹೋಗುತ್ತಿದ್ದರು. ಹೀಗಾಗಿ, ನಾವು ಕೇಸ್ ಪಡೆದು ತನಿಖೆ ಮಾಡುತ್ತೇವೆ. ಸತ್ಯಾಂಶ ಹೊರ ಬರುತ್ತದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಮೇಲೆ ದಾಳಿ ವಿಚಾರಕ್ಕೆ ಮಹಾರಾಷ್ಟ್ರ ಗಡಿ ಭಾಗದ ಎಸ್‌ಪಿಗಳ ಜೊತೆಗೆ ನಾನು ಮಾತಾಡಿದ್ದೇನೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬೆಳಗಾವಿ: ಕನ್ನಡ ಮಾತಾಡಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಆರೋಪ - ಡಿಸಿಪಿ ಹೇಳಿದ್ದೇನು? - LANGUAGE DISPUTE