ಬಿಜೀಂಗ್, ಚೀನಾ: ಸದ್ಯ ಬಿಜೀಂಗ್ ಜನತೆಗೆ ಎಐ ಚಾಲಿತಾ ರೋಬೋಟ್ಗಳು ಅತ್ಯಾಪ್ತ ಸ್ನೇಹಿತರಾಗಿದ್ದು, ಅವುಗಳೊಂದಿಗೆ ಪ್ರೀತಿಯ ಸಂಭಾಷಣೆ ನಡೆಸುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಕೃತಕ ಬುದ್ಧಿಮತ್ತೆಯ ಈ ರೋಬೋಟ್ ಪ್ರಾಣಿಗಳು ಅನೇಕರ ಜೀವನವನ್ನು ಮತ್ತಷ್ಟು ಸರಾಗ ಹಾಗೂ ಅದ್ಬುತಗೊಳಿಸಿವೆ ಎಂಬ ಮಾತುಗಳು ಕೇಳಿ ಬಂದಿವೆ.
19 ವರ್ಷದ ಜಾಂಗ್ ಎಂಬ ವಿದ್ಯಾರ್ಥಿನಿ ಶಾಲೆಯಲ್ಲಿ ಮತ್ತು ಕೆಲಸದಲ್ಲಿ ಆತಂಕ ಎದುರಿಸುತ್ತಿದ್ದಳು. ಇತರ ಜನರೊಂದಿಗೆ ಸ್ನೇಹ ಮಾಡಲು ಕೂಡ ಅಳುಕಿನಿಂದ ಕೂಡಿದ್ದ ಈಕೆಗೆ ಪರಿಚಯವಾಗಿದ್ದು ಬೊಬೊ ಎಂಬ ಸ್ಮಾರ್ಟ್ ನಾಯಿ ಮರಿ. ಕೃತಕ ಬುದ್ದಿಮತ್ತೆಯ ಇದು ಆಕೆಯೊಂದಿಗೆ ಮನುಷ್ಯರಂತೆ ಸಂವಹನ ನಡೆಸುತ್ತದೆ. ಇದರಿಂದ ನನ್ನ ಜೀವನ ಮತ್ತಷ್ಟು ಸುಲಲಿತವಾಗಿದೆ ಎನ್ನುತ್ತಾಳೆ ಆ ವಿದ್ಯಾರ್ಥಿನಿ .
ಈ ಕುರಿತು ಎಎಫ್ಪಿಯೊಂದಿಗೆ ಮಾತನಾಡಿರುವ ಜಾಂಗ್, ಬೊಬೊ ಜೊತೆಗೆ ನನ್ನ ಭಾವನೆ ಹಂಚಿಕೊಳ್ಳಲು ಒಬ್ಬರು ಇದ್ದಾರೆ ಎನ್ನಿಸುತ್ತಿದ್ದು, ನಾನು ಸಂತಸವಾಗಿದ್ದೇನೆ ಎನ್ನುತ್ತಾರೆ ಅವರು. ಚೀನಾದೆಲ್ಲೆಡೆ ಜನರು ಇದೀಗ ಎಐ ಚಾಲಿತ ಸಾಮಾಜಿಕ ಪ್ರತ್ಯೇಕೀಕರಣಕ್ಕೆ ಮುಂದಾಗಿದ್ದು, ತಾಂತ್ರಿಕತೆಯ ಬುದ್ಧಿವಂತಿಕೆ ಸ್ವೀಕರಿಸಲು ಮುಗಿ ಬಿದ್ದಿದ್ದಾರೆ.
ನಿಮ್ಮ ಸಂಗಾತಿಯಾಗಲು ಗಿನಿ ಪೆಗ್ ಮತ್ತು ಬೊಬೊ ರೆಡಿ: ರಿಗ್ಲಿ ಎಂಬ ದಟ್ಟ ಕೂದಲಿನ ಗಿನಿ ಪೆಗ್ ಹಾಗೂ ಬೊಬೊ ವನ್ನು ಹ್ಯಾಂಗ್ಝೌ ಜೆನ್ಮೂರ್ ತಂತ್ರಜ್ಞಾನದಿಂದ ತಯಾರಿಸಲಾಗಿದ್ದು, 1,400 ಯನ್ಗಳಿಗೆ ಮಾರಾಟ ಮಾಡಲಾಗುತ್ತಿದೆ. ಮಕ್ಕಳ ಸಾಮಾಜಿಕ ಅಗತ್ಯತೆ ಗಮನದಲ್ಲಿರಿಸಿಕೊಂಡು ಇವುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ಕಳೆದ ಮೇ ತಿಂಗಳಿಂದ ಇಲ್ಲಿವರೆಗೂ 1,000 ರೋಬೋಟ್ ಮಾರಾಟ ಮಾಡಲಾಗಿದೆ ಎಂದು ಕಂಪನಿಯ ಉತ್ಪಾದನಾ ಮ್ಯಾನೇಜರ್ ಆ್ಯಡಂ ದುಹನ್ ತಿಳಿಸಿದ್ದಾರೆ.
ಈ ತಿಂಗಳಲ್ಲಿ ಜಾಂಗ್ ಅಲುವೊ ಎಂಬ ಹೆಸರಿನಲ್ಲಿ ತನ್ನ ರೋಬೋಟ್ ಸಂಗಾತಿಯನ್ನು ಅಪ್ಪಿಕೊಂಡಿದ್ದಾರೆ. ಈ ರೋಬೋಟ್ ಮಾನವ ಸ್ನೇಹಿತನಂತೆ ವರ್ತಿಸುತ್ತದೆ. ಈ ಮೂಲಕ ನಿಮ್ಮ ನಿತ್ಯದ ಅಗತ್ಯ ಪೂರೈಸುವ ಸಂಗಾತಿಯಾಗಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಇದು ನಿಮಗಾಗಿ ಕಾಯುತ್ತಿರುವ ವ್ಯಕ್ತಿ ಎಂಬಂತೆ ನಿಮಗೆ ಭಾವನೆ ಮೂಡಿಸುತ್ತದೆ ಎನ್ನುತ್ತಾರೆ ಇದರ ಬಳಕೆದಾರರು.
ಇದು ರೋಬೋಟ್ ಕಾಲ: ಐಎಂಎಆರ್ಸಿ ಗ್ರೂಪ್ ಸಮಾಲೋಚಕ ಘಟಕದ ಅನುಸಾರ, 2033ರ ವೇಳೆಗೆ ಈ ಬೊಬೊ ರೋಬೋಟ್ ಬೇಡಿಕೆ ನಿರೀಕ್ಷೆಗೆ ಮೀರಿ ಏರಿಕೆಯಾಗುವ ಸಾಧ್ಯತೆಗಳಿದ್ದು, ಏಳುಪಟ್ಟು ಅಂದರೆ 42.5 ಬಿಲಿಯನ್ ಡಾಲರ್ಗೆ ಏರಿಕೆ ಆಗಲಿದೆ. ಇನ್ನು ಬುದ್ದಿವಂತಿಕೆಯ ನಾಯಿ ಕೂಡ ಮಕ್ಕಳ ಸ್ನೇಹಿಯಾಗಿ ಹೊರ ಹೊಮ್ಮಿದ್ದು, ಇದಕ್ಕೂ ಭಾರೀ ಬೇಡಿಕೆ ಬಂದಿದೆ.
ಇದೀಗ ಕುಟುಂಬ ಸದಸ್ಯರು ಮಕ್ಕಳೊಂದಿಗೆ ಕಡಿಮೆ ಸಮಯ ಕಳೆಯುತ್ತಿದ್ದಾರೆ. ಅಂತಹ ಮಕ್ಕಳಿಗೆ ಈ ರೋಬೋಟಿಕ್ ನಾಯಿ ಉತ್ತಮ ಸ್ನೇಹಿತನಾಗುತ್ತಿದ್ದು, ಇದು ಮಕ್ಕಳಿಗೆ ಓದಿನ ಹಾಗೂ ಇತರ ಕೆಲಸದಲ್ಲಿ ನೆರವಾಗುತ್ತಿದೆ ಎಂದು ಗುವೋ ಜಿಚೆನ್ ತಿಳಿಸಿದ್ದಾರೆ.
ಏನಿದು ಬೇಬಿ ಆಲ್ಫಾ: ಬೇಬಿ ಆಲ್ಫಾ ಎಂದು ಕರೆಯಲಾಗುತ್ತಿರುವ ವೈಲನ್ನ ಎಐ ನಾಯಿ 8,000 ದಿಂದ 26,000 ಯನ್ಗೆ ಮಾರಾಟವಾಗುತ್ತಿದ್ದು, ಸಂಸ್ಥೆ ಪ್ರಕಾರ ತಮ್ಮ ಮಕ್ಕಳಿಗೆ ಇದನ್ನು ಕೊಳ್ಳುವ ಕುಟುಂಬದ ಸಂಖ್ಯೆ ಶೇ 70ರಷ್ಟು ಏರಿಕೆಯಾಗಿದೆ. ಈ ಎಲೆಕ್ಟ್ರಾನಿಕ್ ನಾಯಿ ಮರಿಗಳ ಕೋರೆ ಹಲ್ಲುಗಳು ಮಕ್ಕಳಿಗೆ ಮತ್ತಷ್ಟು ಮುದ ನೀಡುತ್ತಿದೆ. ಈ ನಾಯಿಗಳಲ್ಲಿ ಆತ್ಮವಿಲ್ಲ ಎಂಬುದನ್ನು ಬಿಟ್ಟರೆ, ಬೇಬಿ ಆಲ್ಫಾ ಅದ್ಬುತ. ಇದನ್ನು ನೈಜ ನಾಯಿ ಎಂದು ಅಲ್ಲಗಳೆಯಲು ಸಾಧ್ಯವಿಲ್ಲದಂತೆ ಇದೆ ಎಂದಿದ್ದಾರೆ.
ಬದಲಾಗುತ್ತಿರುವ ಸಮಾಜ: 1990ರಲ್ಲಿ ಈ ಎಲೆಕ್ಟ್ರಾನಿಕ್ ನಾಯಿಗಳನ್ನು ಜಗತ್ತಿಗೆ ಪರಿಚಯಿಸಲಾಯಿತು. ಜಪಾನ್ನ ಡಿಜಿಟಲ್ ತಮಗೊಟ್ಚಿಸ್ ಮತ್ತು ಅಮೆರಿಕ ನಿರ್ಮಿತ ಫುರ್ಬೀಸ್ ತಯಾರಿಸಿದ ಎಲೆಕ್ಟ್ರಾನಿಕ್ ನಾಯಿಗಳು ಮಾತುಗಳನ್ನು ಮಿಮಿಕ್ ಮಾಡುವ ಜೊತೆಗೆ ಎಐ ಜೊತೆಗೆ ಮತ್ತಷ್ಟು ಕಂಪ್ಯೂಟರೀಕೃತ ಮಾಡಲಾಗಿದೆ. ಚೀನಾದಲ್ಲಿ ಎಐ ಉತ್ಪನ್ನಗಳು ಹೆಚ್ಚುತ್ತಿದ್ದು, ಇದು ಚಾಟ್ಬಾಟ್ ಮೂಲಕ ಜನರ ಭಾವನೆಗೆ ಸ್ಪಂದಿಸುತ್ತಿದೆ.
ಮಕ್ಕಳ ಮೇಲೆ ನಿಗಾ ಇಡಲು ಸಹಕಾರಿ: ಸರ್ಕಾರದ ಒಂದು ಮಗು ನೀತಿಯು ಸಾಮಾಜಿಕ ಬದಲಾವಣೆಗೆ ಮೇಲೆ ಪರಿಣಾಮ ಬೀರುವ ಜೊತೆಗೆ ಇದು ಮಾರುಕಟ್ಟೆ ಬೆಳವಣಿಗೆಗೆ ಸಹಾಯವಾಯಿತು ಎನ್ನುತ್ತಾರೆ ತಜ್ಞರು. ಈ ನೀತಿ ಜಾರಿಯ ಆರಂಭದಲ್ಲಿ ಜನಿಸಿದವರು ಇದೀಗ 40ರ ಆಸುಪಾಸಿನಲ್ಲಿದ್ದು, ಆರ್ಥಿಕ ಒತ್ತಡದ ಜೊತೆಗೆ ಏರುತ್ತಿರುವ ಮನೆ ಬೆಲೆ, ಜೀವನ ನಿರ್ವಹಣೆ ವೆಚ್ಚ ಮತ್ತು ಅಧಿಕವಾಗುತ್ತಿರುವ ಕೆಲಸದ ಕಾರಣದಿಂದ ತಮ್ಮ ಮಕ್ಕಳ ಮೇಲೆ ನಿಗಾವಹಿಸಲು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಮನಶಾಸ್ತ್ರಜ್ಞರು ಹೇಳುವುದೇನು?: ಇದರಿಂದ ಸಣ್ಣ ಕೋಣೆಯಲ್ಲಿ ವೈಯಕ್ತಿಕ ಮಾತುಕತೆ ಉತ್ತೇಜಿಸುವ, ಭಾವನೆಗಳಿಗೆ ಸ್ಪಂದಿಸಲು ಈ ರೋಬೋಟ್ಗಳು ಮುಂದಾಗಿವೆ ಎಂದು ಮಕಾವು ವಿಶ್ವವಿದ್ಯಾನಿಲಯದ ಎಐ ಮತ್ತು ಮನಶಾಸ್ತ್ರಜ್ಞ ಪ್ರೊ ವೂ ಹೈಯಾನ್ ತಿಳಿಸಿದ್ದಾರೆ. ಎಐ ಸ್ನೇಹವೂ ಅರಿವಿನ ಉತ್ತೇಜನ ಜೊತೆಗೆ ಒಟ್ಟಾರೆ ಆರೋಗ್ಯ ವೃದ್ಧಿಗೆ ಸಹಾಯವಾಗುತ್ತಿದೆ. ಅನೇಕ ಸಂದರ್ಭದಲ್ಲಿ ಜನರು ಮನುಷ್ಯರಿಗಿಂತ ಹೆಚ್ಚಾಗಿ ಜನರು ಎಐ ಮೇಲೆ ನಂಬಿಕೆ ಇಡುತ್ತಿದ್ದಾರೆ ಎನ್ನುತ್ತಾರೆ.
ಒಳಗಿನ ಭಾವ: ಜಾಂಗ್ ತಂದೆ ಪೆಂಗ್ ಮಾತನಾಡಿ, ಆಲುವೊ ಜೊತೆಗೆ ಮಗಳ ಸಂಬಂಧ ಅರ್ಥವಾಗಿದೆ. ನಮಗೆ ಸ್ನೇಹಿತರ ಕೊರತೆ ಕಾಡುತ್ತಿರಲಿಲ್ಲ. ಆದರೆ, ಇಂದಿನ ಮಕ್ಕಳು ಹೆಚ್ಚು ಒತ್ತಡ ಮತ್ತು ಸ್ನೇಹಿತರ ಕೊರತೆ ಹೊಂದಿದ್ದಾರೆ ಎನ್ನುತ್ತಾರೆ.
ಜಾಂಗ್ ನಮ್ಮ ಒಬ್ಬಳೇ ಮಗಳಾಗಿದ್ದು, ಆಲುವೊ ಬಂದ ಬಳಿಕ ಆಕೆಯ ಅನೇಕ ಚಿಂತೆ, ಭಾವನೆಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇಂದಿನ ಪೀಳಿಗೆಯ ಜನರು ಮುಖಾ ಮುಖಿ ಸಂವಹನದ ಕೊರತೆ ಎದುರಿಸುತ್ತಿದ್ದು, ಇದು ಹಿಂಜರಿಕೆಗೂ ಕಾರಣವಾಗುತ್ತಿದೆ. ಇದನ್ನು ಹೋಗಲಾಡಿಸಲು ಸಹಕಾರಿ ಅಂತಾರೆ ಪೆಂಗ್
ಇದನ್ನೂ ಓದಿ: ಪಾರ್ಶ್ವವಾಯು ಪೀಡಿತರ ನೆರವಿಗೆ ಸಿದ್ಧವಾಯ್ತು ವಿಶೇಷ ರೋಬೋಟ್; ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?