ಹುಬ್ಬಳ್ಳಿ : ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ಮಾಡದಿರುವುದೇ ಬಿಜೆಪಿ ಸೋಲಿಗೆ ಪ್ರಮುಖ ಕಾರಣ. ಬಿಜೆಪಿ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಲಿಲ್ಲ. ಈ ಹಿನ್ನೆಲೆ ಹಿಂದೂಗಳು ವಿಧಾನಸಭಾ ಚುನಾವಣೆಯಲ್ಲಿ ಸರಿಯಾದ ಕೆಲಸ ಮಾಡಲಿಲ್ಲ. ಒಂದು ವೇಳೆ ಹಿಂದೂಗಳ ರಕ್ಷಣೆ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡಿದ್ದಲ್ಲಿ ಉತ್ತರ ಪ್ರದೇಶದ ವಾತಾವರಣ ರಾಜ್ಯದಲ್ಲಿ ಇರುತ್ತಿತ್ತು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿಯಲ್ಲಿ ನಮ್ಮ ತಪ್ಪುಗಳು ಬಹಳಷ್ಟಿವೆ. ಯಡಿಯೂರಪ್ಪ ಏನೂ ಮಾಡಲಿಲ್ಲ, ಶಿವಮೊಗ್ಗದಲ್ಲಿ ನಿಯಂತ್ರಣ ಮಾಡದೇ ಅವರು ರಾಜ್ಯದಲ್ಲಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ನಾನೇ ನಂಬರ್ ಒನ್ ಲೀಡರ್ : ಯತ್ನಾಳ್ ಅವರು ನಂಬರ್ ಒನ್ ಲೀಡರ್ ಯಾವಾಗ ಆಗುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹಣ ತೆಗೆದುಕೊಂಡು ಸರ್ವೇ ಮಾಡೋದನ್ನು ಬಿಡಲಿ, ಬೋಗಸ್ ಸರ್ವೇ ಬಿಡಬೇಕು. ಸರಿಯಾದ ಸರ್ವೇ ಆಗಬೇಕು. ನಮ್ಮ ಸರ್ವೇ ಪ್ರಕಾರ, ನಾನೇ ನಂಬರ್ ಒನ್ ಲೀಡರ್ ಎಂದರು.
ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ವಾಲ್ಮೀಕಿ ನಿಗಮದಲ್ಲಿ ಮೀಸಲಿಟ್ಟ 187 ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ಇದೀಗ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ಇದನ್ನು ಸ್ವತಃ ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಿದರು.
ಸರ್ಕಾರ ಮತ್ತು ವಿಜಯೇಂದ್ರ ನಡುವೆ ಅಡ್ಜೆಸ್ಟ್ಮೆಂಟ್ ಇದೆ : ನಡುವೆ ರಾಜ್ಯ ಸರ್ಕಾರವನ್ನು ನಾವು ಟಾರ್ಗೆಟ್ ಮಾಡುತ್ತಿಲ್ಲ, ಬದಲಾಗಿ ಸಿ ಟಿ ರವಿ, ನನ್ನ ಸೇರಿದಂತೆ ಹಿಂದೂಪರವಾಗಿ ಮಾತನಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅದೇ ವಿಜಯೇಂದ್ರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಇದನ್ನು ನೋಡಿದರೆ ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜೆಸ್ಟ್ಮೆಂಟ್ ಇದೆ ಎಂದರು.
ಬಿಜೆಪಿಯವರು ಗೋಡ್ಸೆ ವಂಶಸ್ಥರು ಎಂಬ ಕಾಂಗ್ರೆಸ್ನವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗಾಂಧೀಜಿಗೆ ಗೋಡ್ಸೆ ಹೊಡೆದಿದ್ದು ಒಂದೇ ಗುಂಡು, ಇನ್ನೆರಡು ಗುಂಡುಗಳು ಎಲ್ಲಿಂದ ಬಂದವು?. ಒಂದು ಗುಂಡು ಗೋಡ್ಸೆ ಹೊಡೆದಿದ್ದು ಎಂದು ಕೋರ್ಟ್ನಲ್ಲಿ ವಾದ ಪ್ರತಿವಾದ ಆಗಿದೆ. ಇನ್ನೆರಡು ಗುಂಡುಗಳನ್ನು ನೆಹರು ಹೊಡೆಸಿದ್ದಾರಾ? ಎಂದು ನಮಗೆ ಸಂಶಯವಿದೆ. ಗಾಂಧಿ ಅವರನ್ನು ಕೊಲ್ಲಿಸಿದ್ದು ನೆಹರು ಅವರೇ. ನೆಹರು ಅವರಿಗೆ ಸರ್ವಾಧಿಕಾರಿ ಆಗುವ ಹಂಬಲವಿತ್ತು. ಅದಕ್ಕೆ ಅವರೇ ಗಾಂಧಿಯನ್ನು ಕೊಲ್ಲಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನಮ್ಮ ವಿರೋಧಿ ಬಣ ದೆಹಲಿಗೆ ಹೋಗಲಿ, ವಾಷಿಂಗ್ಟನ್ಗೆ ಹೋಗಲಿ. ಎಲ್ಲಿ ಬೇಕಾದಲ್ಲಿ ಹೋಗಲಿ ಸತ್ಯ ಸತ್ಯವೇ. ಮಾಧ್ಯಮದವರು ಒಳ್ಳೆಯವರನ್ನು ಮಾತನಾಡಿಸಿ, ಕಿಸೆ ಕಳ್ಳರನ್ನು, ದಲಿತರ ಮೀಸಲಾತಿ ಕಸಿದುಕೊಂಡ ನಾಲಾಯಕರನ್ನು ಬಿಡಬೇಕು ಎಂದು ಪರೋಕ್ಷವಾಗಿ ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ತಂದೆಯ ಸಹಿ ನಕಲಿ ಮಾಡಿದ ವಿಜಯೇಂದ್ರ ಅವರಿಗೆ ರಮೇಶ್ ಜಾರಕಿಹೊಳಿ ನಾಲಾಯಕ ಅನ್ನದೇ ಸಾಚಾ ಅನ್ನಬೇಕಾ? ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತು ಇದ್ದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟು ಸಹಿ ಮಾಡಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂದು ಸವಾಲ್ ಕೂಡಾ ಹಾಕಿದರು.
ಎಲ್ಲ ಸಹಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಯಡಿಯೂರಪ್ಪ ಅವರ ಸಹಿ ಕಳುಹಿಸಿ ಪ್ರಯೋಗ ಮಾಡಿಸಿ. ಅದು ಸತ್ಯ ಆದಲ್ಲಿ ನಾಲಾಯಕ್ ಎನ್ನುವ ಪ್ರಶ್ನೆಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಅಧ್ಯಕ್ಷರ ಚುನಾವಣೆ ನಡೆಸಲು ನಾವು ಸಿದ್ದ: ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾವು ಅಭ್ಯರ್ಥಿಯನ್ನು ಹಾಕಿದ್ದೇವೆ. ನಮ್ಮದೇ ಕೋರ್ ಕಮಿಟಿಯಿದೆ. ಅಲ್ಲಿ ತೀರ್ಮಾನ ಮಾಡುತ್ತೇವೆ. ಅಧ್ಯಕ್ಷರ ಚುನಾವಣೆ ನಡೆಸಲು ನಾವು ಸಿದ್ದ ಎಂದು ಹೇಳಿದರು.
ಮತ್ತೊಂದು ಅವಧಿಗೆ ವಿಜಯೇಂದ್ರ ಅಧಿಕಾರ ನಡೆಸುವ ಆಸೆಯಿದೆ ಎಂದರೆ ಕರ್ನಾಟಕವನ್ನು ಲೂಟಿ ಹೊಡೆಯುವ ಆಸೆ ಇದೆ ಎಂದರ್ಥ. ಮತ್ತೊಮ್ಮೆ ನಕಲಿ ಸಹಿ ಮೂಲಕ ಕರ್ನಾಟಕವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಹುನ್ನಾರ ಎಂದರ್ಥ ಎಂದರು.
ನನ್ನ ವಿರುದ್ಧ ಬಿಜೆಪಿಯವರು ದೂರು ಕೊಟ್ಟು ಕೊಟ್ಟು ಬಿಜೆಪಿ ಕಾರ್ಯಾಲಯದ ಒಂದು ರೂಮ್ ತುಂಬಿದೆ. ಇದೊಂದು ದೂರು ಕೊಟ್ಟಲ್ಲಿ ಅದು ಹೋಗಿ ಬೀಳುತ್ತೆ. ಈಗಾಗಲೇ ನೋಟಿಸ್ಗೆ ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.
ಮುಡಾ ಹಗರಣದಲ್ಲಿ ಯಾರೂ ಸಾಚಾ ಇಲ್ಲ, ಸಿದ್ದರಾಮಯ್ಯ ಅವರು ಅಪರಾಧಿ ಇದ್ದಾರೆ. ವಿಜಯೇಂದ್ರ, ಜಿ. ಟಿ ದೇವೇಗೌಡರ ಪಾಲು ಕೂಡಾ ಇದೆ ಎಂದು ಹೇಳಿದರು. ರಾಜ್ಯದಲ್ಲಿ ಹಿಂದೂಗಳನ್ನು ಸಿಎಂ ಆದಿಯಾಗಿ ಸರ್ಕಾರ ಅಪಮಾನ ಮಾಡುತ್ತಿದೆ. ಹಿಂದೂ ಹೋರಾಟಗಾರರನ್ನು ಜೈಲಿಗೆ ಕಳಿಸುತ್ತಿದ್ದಾರೆ. ಅದೇ ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕುಯ್ಯುವ ಕೆಲಸ ಮಾಡಿದ್ದಾರೆ. ಅಂತವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂಗಳ ಭಾವನೆಗೆ ದಕ್ಕೆ ತಂದು, ಹಿಂದೂಗಳ ಸ್ವಾಭಿಮಾನವನ್ನು ಕೆದಕಿ ರಾಜ್ಯದಲ್ಲಿ ಮತ್ತೊಮ್ಮೆ ಗಲಭೆ ಎಬ್ಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಇದನ್ನೂ ಓದಿ : ಬಸನಗೌಡ ಯತ್ನಾಳ್ ಹೇಳಿಕೆಗೆ ಬಿ.ವೈ.ವಿಜಯೇಂದ್ರ ಟಾಂಗ್ - B Y VIJAYENDRA TONG