ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರ ಬಳಿಯಿರುವ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಬೆಂಗಳೂರು ಪೊಲೀಸ್ ಆಡಳಿತ ವಿಭಾಗ ಆದೇಶಿಸಿದೆ. ಹತ್ಯೆ ಪ್ರಕರಣ ಮುಗಿಯುವವರೆಗೂ ಲೈಸೆನ್ಸ್ ಅಮಾನತು ಮಾಡಲಾಗಿದ್ದು, ಗನ್ ವಶಕ್ಕೆ ಪಡೆದುಕೊಳ್ಳುವಂತೆ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ಸೂಚಿಸಲಾಗಿದೆ.
ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನೀವು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ನಿಮ್ಮ ಬಳಿಯಿರುವ ಲೈಸೆನ್ಸ್ ಹೊಂದಿರುವ ಗನ್ ಬಳಸಿ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನಗಳಿವೆ. ನಿಮ್ಮ ಗನ್ ಲೈಸೆನ್ಸ್ ರದ್ದು ಮಾಡದಿರಲು ಕಾರಣ ನೀಡಿ ಎಂದು ದರ್ಶನ್ ಅವರಿಗೆ ಈ ಹಿಂದೆ ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹೂ ನೋಟಿಸ್ ನೀಡಿದ್ದರು. ನೋಟಿಸ್‌ಗೆ ಉತ್ತರಿಸಿದ್ದ ದರ್ಶನ್, "ತಾವು ಓರ್ವ ಸೆಲೆಬ್ರಿಟಿ, ತಾವು ಹೋಗುವ ಕಡೆಗಳಲ್ಲಿ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಗನ್ ಅವಶ್ಯಕತೆಯಿದೆ'' ಎಂದಿದ್ದರು.
ದರ್ಶನ್ ನೀಡಿದ್ದ ಕಾರಣ ಪರಿಗಣಿಸದ ಬೆಂಗಳೂರು ಪೊಲೀಸ್ ಆಡಳಿತ ವಿಭಾಗ, ಮುನ್ನೆಚ್ಚರಿಕಾ ಕ್ರಮವಾಗಿ ದರ್ಶನ್ ಅವರ ಗನ್ ಲೈಸೆನ್ಸ್ ತಾತ್ಕಾಲಿಕ ಅಮಾನತು ಮಾಡಿದೆ.
ಗನ್ ಲೈಸೆನ್ಸ್ ರದ್ದು ಮಾಡದಂತೆ ಮನವಿ ಮಾಡಿದ್ದ ದರ್ಶನ್: ನಟ ಪಡೆದಿರುವ ಗನ್ ಅನ್ನು ರದ್ದುಪಡಿಸುವ ಸಂಬಂಧ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ದರ್ಶನ್, ಗನ್ ಲೈಸೆನ್ಸ್ ರದ್ದುಪಡಿಸದಂತೆ ದರ್ಶನ್ ಕೋರಿದ್ದರು.
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ. ಕಾನೂನಾತ್ಮಕವಾಗಿ ಜಾಮೀನು ಪಡೆದುಕೊಂಡಿದ್ದೇನೆ. ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನೂ ಪಾಲನೆ ಮಾಡುತ್ತಿದ್ದೇನೆ. ಬೆಂಗಳೂರಿನಿಂದ ಹೊರಗೆ ಹೋಗುವ ಮುನ್ನ ಕೋರ್ಟ್ ಅನುಮತಿ ಸಹ ಪಡೆದಿದ್ದೇನೆ. ಹೀಗಾಗಿ, ತಾವು ಪಡೆದ ಬಂದೂಕಿನ ಪರವಾನಗಿ ರದ್ದುಪಡಿಸುವ ಅಗತ್ಯ ಇಲ್ಲ. ಜೊತೆಗೆ, ತಾನು ಕನ್ನಡ ಸಿನಿಮಾ ರಂಗದ ಖ್ಯಾತ ನಟನಾಗಿದ್ದು, ಅಸಂಖ್ಯಾತ ಅಭಿಮಾನಿ ಬಳಗವಿದೆ. ಸಿನಿಮಾ ಚಿತ್ರೀಕರಣ ಮತ್ತು ವೈಯಕ್ತಿಕ ಕಾರ್ಯಕ್ರಮಗಳಿಗೆ ಬೆಂಗಳೂರಿನಿಂದ ಹೊರಗೆ ಪ್ರಯಾಣಿಸುವೆ. ನನ್ನ ಭದ್ರತೆ ಸಲುವಾಗಿ ಬಂದೂಕು ಬಳಕೆ ಅಗತ್ಯವಾಗಿದೆ. ಸುರಕ್ಷತೆಯ ಹಿನ್ನೆಲೆಯಲ್ಲಿ ಬಂದೂಕಿನ ಅಗತ್ಯವಿದೆ ಎಂದು ದರ್ಶನ್ ಮನವಿ ಮಾಡಿದ್ದರು.
ಕಳೆದ ಜೂನ್ 8ರಂದು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿದ ಆರೋಪದಡಿ ಜೂ.8ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಂತ-ಹಂತವಾಗಿ 17 ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ಎಲ್ಲಾ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ: ಪತ್ನಿ ಜೊತೆ ಆಗಮಿಸಿ ಚಾಮುಂಡೇಶ್ವರಿ ದರ್ಶನ ಪಡೆದ ದರ್ಶನ್: ವಿಶೇಷ ಪೂಜೆ ಸಲ್ಲಿಕೆ
ಇದನ್ನೂ ಓದಿ: ಪೊಲೀಸರು ಜಪ್ತಿ ಮಾಡಿದ್ದ ಹಣ ಮರಳಿಸಲು ಸೂಚಿಸುವಂತೆ ಕೋರಿ ದರ್ಶನ್ ಅರ್ಜಿ : ವಿಚಾರಣೆ ಮುಂದೂಡಿಕೆ