ನವದೆಹಲಿ: ಚೀನಾದ ಲಾಂಗ್ ಮಾರ್ಚ್ 6 ಎ ರಾಕೆಟ್ 18 ಕಿಯಾನ್ ಫಾನ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದ ಬೆನ್ನಲ್ಲೇ ಭೂಮಿಯ ಕೆಳ ಕಕ್ಷೆಯಲ್ಲಿ 300 ಚೂರುಗಳಾಗಿ ಸ್ಫೋಟಗೊಂಡಿದೆ ಎಂದು ಅಮೆರಿಕದ ಸ್ಪೇಸ್ ಕಮಾಂಡ್ (ಯುಎಸ್ ಸ್ಪೇಸ್ ಕಾಮ್) ಶುಕ್ರವಾರ ತಿಳಿಸಿದೆ. ಈ 18 ಉಪಗ್ರಹಗಳು ಎಲೋನ್ ಮಸ್ಕ್ ಅವರ ಸ್ಟಾರ್ಲಿಂಕ್ ಮಾದರಿಯಲ್ಲಿ ಕಿಯಾನ್ ಫಾನ್ ಬ್ರಾಡ್ಬ್ಯಾಂಡ್ ನೆಟ್ವರ್ಕ್ ಎಂದು ಹೆಸರಿಸಲಾದ ಚೀನಾದ ತನ್ನದೇ ಆದ ಉಪಗ್ರಹಗಳ ಸರಣಿಯ ಭಾಗವಾಗಿವೆ.
ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದ ತೈಯುವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 6 ಎ ರಾಕೆಟ್ ಮೂಲಕ ಮಂಗಳವಾರ 18 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ಶಾಂಘೈನಲ್ಲಿರುವ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ನ ಇನ್ನೋವೇಶನ್ ಅಕಾಡೆಮಿ ಫಾರ್ ಮೈಕ್ರೋಸ್ಯಾಟಲೈಟ್ಸ್ ಈ ಉಪಗ್ರಹಗಳನ್ನು ವಿನ್ಯಾಸಗೊಳಿಸಿ ನಿರ್ಮಿಸಿದೆ.
ಉಪಗ್ರಹಗಳನ್ನ ಯಶಸ್ವಿಯಾಗಿ ಕಕ್ಷೆಗೆ ಸೇರಿದ ರಾಕೆಟ್, ಬಳಿಕ ಸ್ಫೋಟ:ರಾಕೆಟ್ ಸುಮಾರು 800 ಕಿಲೋಮೀಟರ್ ಎತ್ತರದಲ್ಲಿ 18 ಉಪಗ್ರಹಗಳನ್ನು ಯಶಸ್ವಿಯಾಗಿ ತಲುಪಿಸಿತು. ಆದರೆ ಇದಾದ ನಂತರ ರಾಕೆಟ್ನ ಮೇಲ್ಭಾಗವು ಮುರಿದು ಸ್ಫೋಟಗೊಂಡಿತು. ಸ್ಫೋಟದಿಂದ ಭೂಮಿಯ ಸುತ್ತಲೂ ಪತ್ತೆ ಮಾಡಬಹುದಾದ ಅವಶೇಷಗಳ ಮೋಡ ಸೃಷ್ಟಿಯಾಯಿತು ಎಂದು ಯುಎಸ್ ಸ್ಪೇಸ್ ಕಾಮ್ ತಿಳಿಸಿದೆ.
"ಆಗಸ್ಟ್ 6, 2024 ರಂದು ಉಡಾಯಿಸಲಾದ ಲಾಂಗ್ ಮಾರ್ಚ್ 6 ಎ ರಾಕೆಟ್ ಸ್ಫೋಟಗೊಂಡಿರುವುದನ್ನು ಯುಎಸ್ ಸ್ಪೇಸ್ ಕಾಮ್ ದೃಢಪಡಿಸುತ್ತದೆ. ಇದರ ಪರಿಣಾಮವಾಗಿ ಭೂಮಿಯ ಕೆಳ ಕಕ್ಷೆಯಲ್ಲಿ 300 ಕ್ಕೂ ಹೆಚ್ಚು ಪತ್ತೆಹಚ್ಚಬಹುದಾದ ಅವಶೇಷಗಳು ಕಂಡುಬಂದಿವೆ" ಎಂದು ಸಂಸ್ಥೆ ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಡಾಟ್ ಕಾಮ್ ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.