ಬೆಂಗಳೂರು: ''ಹೆಚ್ಎಂಟಿ ವಶದಲ್ಲಿರುವ ಭೂಮಿಯು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸಚಿವ ಸಂಪುಟದ ಅನುಮತಿ ಪಡೆಯದೆ, ಸುಪ್ರೀಂಕೋರ್ಟ್ಗೆ ಡಿನೋಟಿಫಿಕೇಷನ್ ಅನುಮತಿ ಕೋರಿ ಮಧ್ಯಂತರ ಅರ್ಜಿ (Interlocutory Application) ಸಲ್ಲಿಸಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅಧಿಕಾರಿಗಳ ಉತ್ತರ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು'' ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಹೆಚ್ಎಂಟಿ ವಶದಲ್ಲಿರುವ 443 ಎಕರೆ ಅರಣ್ಯ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ತಿಳಿಸಿ ಕೆಲವು ಅಧಿಕಾರಿಗಳು, ಸಚಿವ ಸಂಪುಟದ ಗಮನಕ್ಕೂ ತಾರದೆ ತಾವೇ 2020ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಇಂಟರ್ಲೊಕ್ಯುಟರಿ ಅರ್ಜಿ (ಐ.ಎ.) ಹಾಕಿದ್ದರು. ಈ ಐ. ಎ. ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ ಐ. ಎ. ಹಿಂಪಡೆಯಲು, ಘಟನೋತ್ತರ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೂ ಧನ್ಯವಾದ ಅರ್ಪಿಸುತ್ತೇನೆ'' ಎಂದರು.
''ಹೆಚ್ಎಂಟಿಯು ಖಾಸಗಿ ಸಂಸ್ಥೆಗಳೂ ಸೇರಿದಂತೆ ಹಲವು ಸಂಸ್ಥೆಗಳಿಗೆ ಈಗಾಗಲೇ 160 ಎಕರೆ ಜಮೀನನ್ನು 313 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದೆ. ಆದರೆ ಆಗ ಘನ ಸುಪ್ರೀಂಕೋರ್ಟ್ಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಈ ಭೂಮಿಯ ಮೌಲ್ಯ 14,300 ಕೋಟಿ ಎಂದು ಹೇಳಿಕೊಂಡಿದೆ'' ಎಂದೂ ತಿಳಿಸಿದರು.
ಇದನ್ನೂ ಓದಿ: ಮುಡಾದ 631 ಸೈಟ್‌ಗಳ ವಿವರ ಕೇಳಿ ಆಯುಕ್ತರಿಗೆ ಪತ್ರ ಬರೆದ ಜಾರಿ ನಿರ್ದೇಶನಾಲಯ
''ಆದರೆ ಈ ಭೂಮಿಯ ಮೌಲ್ಯ ಅತ್ಯಮೂಲ್ಯವಾದದ್ದು. ಬೆಂಗಳೂರು ನಗರಕ್ಕೆ ಅತ್ಯಗತ್ಯವಾಗಿ ಬೇಕಾದ ಶ್ವಾಸತಾಣ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇಂತಹ ಭೂಮಿಯನ್ನು ನಷ್ಟದಿಂದ ಮುಚ್ಚಿ ಹೋಗಿರುವ ಹೆಚ್ಎಂಟಿಯು ಅಕ್ರಮವಾಗಿ ಖಾಸಗಿಯವರಿಗೆ ಮಾರಾಟ ಮಾಡಿ, ರಿಯಲ್ ಎಸ್ಟೇಟ್ ಮಾಡಲು ಬಿಡುವುದಿಲ್ಲ. ಈ ಭೂಮಿಯನ್ನು ಮರಳಿ ವಶಕ್ಕೆ ಪಡೆದು, ಅಲ್ಲಿ ಕಬ್ಬನ್ ಪಾರ್ಕ್ ಅಥವಾ ಲಾಲ್ ಬಾಗ್ ರೀತಿಯಲ್ಲಿ ಒಂದು ಉದ್ಯಾನ ನಿರ್ಮಿಸಲಾಗುವುದು. ಇದು 7 ಕೋಟಿ ಕನ್ನಡಿಗರ ಆಸ್ತಿ. ಇದರ ರಕ್ಷಣೆಗೆ ಎಲ್ಲ ಕನ್ನಡಿಗರೂ ಸರ್ಕಾರದ ಜೊತೆ ನಿಲ್ಲಬೇಕು'' ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಎಸ್ಸಿ, ಎಸ್ಟಿ ಆಯೋಗಕ್ಕೆ ಅಧ್ಯಕ್ಷರ ನೇಮಿಸದ ಕ್ರಮ ಪ್ರಶ್ನಿಸಿ ಅರ್ಜಿ : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್