ಶಿವಮೊಗ್ಗ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಮತ್ತು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಪ್ರತ್ಯೇಕ ಗೌರವ ಡಾಕ್ಟರೇಟ್ ಘೋಷಿಸಿವೆ.
92 ವರ್ಷ ವಯಸ್ಸಿನ ಕಾಗೋಡು ತಿಮ್ಮಪ್ಪನವರಿಗೆ ಜ.22ರ ಬೆಳಗ್ಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿಯ ಬಸವ ಸಭಾ ಭವನದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ಅದೇ ದಿನ ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ಮಧ್ಯಾಹ್ನ ರಾಜ್ಯಪಾಲರು ಕಾಗೋಡು ತಿಮ್ಮಪ್ಪನವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ಇದರೊಂದಿಗೆ ಒಂದೇ ದಿನ ಕಾಗೋಡು ತಿಮ್ಮಪ್ಪನವರು ಎರಡು ಗೌರವ ಡಾಕ್ಟರೇಟ್ ಸ್ವೀಕರಿಸಲಿದ್ದಾರೆ.
ಕುವೆಂಪು ವಿವಿಯ 34 ಘಟಿಕೋತ್ಸವದ ಕುರಿತು ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಜ.22ರಂದು ಬೆಳಗ್ಗೆ ವಿವಿಯ ಬಸವ ಸಭಾ ಭವನದಲ್ಲಿ ಘಟಿಕೋತ್ಸವ ನಡೆಯಲಿದೆ. ಘಟಿಕೋತ್ಸವದಲ್ಲಿ ಕಾಗೋಡು ತಿಮ್ಮಪ್ಪ ಸೇರಿ ಮೂವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಸಮಾಜ ಸೇವೆಗಾಗಿ ಕಾಗೋಡು ತಿಮ್ಮಪ್ಪ ಅವರಿಗೆ, ವಿಜ್ಞಾನಿ ಪ್ರೊ. ಸಿ.ಎಸ್. ಉನ್ನಿ ಕೃಷ್ಣನ್ ಹಾಗೂ ಭದ್ರಾವತಿಯ ಯೋಗ ಗುರು ನಾಗರಾಜ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ವಿವಿಯಿಂದ 115 ಪುರುಷರು ಹಾಗೂ 89 ಮಹಿಳೆಯರು ಸೇರಿ ಒಟ್ಟು 204 ಅಭ್ಯರ್ಥಿಗಳಿಗೆ ಪಿಹೆಚ್ಡಿ ಪ್ರದಾನ ಮಾಡಲಾಗುತ್ತದೆ. 6,872 ವಿದ್ಯಾರ್ಥಿಗಳು ಹಾಗೂ 12,013 ವಿದ್ಯಾರ್ಥಿನಿಯರು ಸೇರಿ ಒಟ್ಟು 18,885 ವಿದ್ಯಾರ್ಥಿಗಳಿಗೆ ಪದವಿಗೆ ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಘಟಿಕೋತ್ಸವದಲ್ಲಿ 13 ವಿದ್ಯಾರ್ಥಿಗಳು ಹಾಗೂ 71 ವಿದ್ಯಾರ್ಥಿನಿಯರು ಸೇರಿ ಒಟ್ಟು 84 ಮಂದಿಗೆ 146 ಸ್ವರ್ಣ ಪದಕ ನೀಡಲಾಗುತ್ತಿದೆ. ಓರ್ವ ವಿದ್ಯಾರ್ಥಿ ಹಾಗೂ 13 ವಿದ್ಯಾರ್ಥಿನಿಯರು ಸೇರಿ 17 ನಗದು ಬಹುಮಾನ ಪಡೆಯಲಿದ್ದಾರೆ. ವಿವಿಯ ಕನ್ನಡ ಭಾರತಿ ವಿಭಾಗದಲ್ಲಿ ವಸಂತ ಕುಮಾರ್ ಬಿ. ಜೆ 10 ಬಂಗಾರದ ಪದಕ ಹಾಗೂ ಒಂದು ನಗದು ಬಹುಮಾನ ಪಡೆಯಲಿದ್ದಾರೆ ಎಂದರು.
ಜ.22ರ ಮಧ್ಯಾಹ್ನ ಕೃಷಿ ವಿವಿ ಘಟಿಕೋತ್ಸವ : ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಕುಲಪತಿ ಡಾ. ಆರ್.ಸಿ. ಜಗದೀಶ್ ಮಾತನಾಡಿ, "ಕೆಳದಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವತಿಯಿಂದ ಸಾಗರದ ಇರುವಕ್ಕಿಯಲ್ಲಿ ಜ.22 ರಂದು ಮಧ್ಯಾಹ್ನ 2 ಗಂಟೆಗೆ 9ನೇ ಘಟಿಕೋತ್ಸವ ಸುಗ್ಗಿ ಸಂಭ್ರಮ ನಡೆಯಲಿದೆ. ಇರುವಕ್ಕಿಯಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕಾರಣರಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ" ಎಂದು ತಿಳಿಸಿದರು.
"ಘಟಿಕೋತ್ಸವದ ಭಾಷಣವನ್ನು ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ಮತ್ತು ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಸ್.ಎಸ್. ಶಶಿಧರ್ ಅವರು ಮಾಡಲಿದ್ದಾರೆ. ಘಟಿಕೋತ್ಸವದಲ್ಲಿ ಒಟ್ಟು 994 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಕೃಷಿ ಮತ್ತು ತೋಟಗಾರಿಕೆ ವಿಭಾಗದಲ್ಲಿ 793 ವಿದ್ಯಾರ್ಥಿಗಳು ಹಾಗೂ ಅರಣ್ಯ ವಿಭಾಗದಲ್ಲಿ 176 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ 25 ವಿದ್ಯಾರ್ಥಿಗಳು ಪಿಹೆಚ್ಡಿ ಪದವಿ ಪಡೆಯುತ್ತಿದ್ದಾರೆ. 17 ವಿದ್ಯಾರ್ಥಿಗಳಿಗೆ ಒಟ್ಟು 31 ಚಿನ್ನದ ಪದಕಗಳನ್ನು ನೀಡಲಾಗುತ್ತದೆ. 28 ಎಂಎಸ್ಸಿ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯಲಿದ್ದಾರೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮೈಸೂರು ವಿವಿ ಘಟಿಕೋತ್ಸವ: ಭೂಮಿಕಾಗೆ 18 ಚಿನ್ನದ ಪದಕ; ಸುಧಾಮೂರ್ತಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್