ನವದೆಹಲಿ: ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಮತ್ತೊಂದು ಎಲೆಕ್ಟ್ರಿಕ್ ಕಾರು ಬಿಎಂಡಬ್ಲ್ಯು ಐ5 ಎಂ60 ಎಕ್ಸ್ ಡ್ರೈವ್ (BMW i5 M60 xDrive) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಎಕ್ಸ್ ಶೋರೂಂ ಬೆಲೆ 1,19,50,000 ರೂಪಾಯಿಗಳಾಗಿದೆ.
ಹೊಸ ಕಾರು ನಾನ್ ಮೆಟಾಲಿಕ್ ಆಲ್ಪೈನ್ ವೈಟ್ ಬಣ್ಣದಲ್ಲಿ ಮತ್ತು ಮೆಟಾಲಿಕ್ ರೂಪದಲ್ಲಿ ಎಂ ಬ್ರೂಕ್ಲಿನ್ ಗ್ರೇ, ಎಂ ಕಾರ್ಬನ್ ಬ್ಲ್ಯಾಕ್, ಕೇಪ್ ಯಾರ್ಕ್ ಗ್ರೀನ್, ಫೈಟೊನಿಕ್ ಬ್ಲೂ, ಬ್ಲ್ಯಾಕ್ ಸಫೈರ್, ಸೋಫಿಸ್ಟೊ ಗ್ರೇ, ಆಕ್ಸೈಡ್ ಗ್ರೇ ಮತ್ತು ಮಿನರಲ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇದು ಈಗ ಕಂಪ್ಲೀಟ್ ಬಿಲ್ಟ್-ಅಪ್ ಯುನಿಟ್ (ಸಿಬಿಯು) ಮಾದರಿಯಲ್ಲಿ ದೇಶಾದ್ಯಂತದ ಎಲ್ಲಾ ಬಿಎಂಡಬ್ಲ್ಯು ಡೀಲರ್ ಶಿಪ್ ಗಳಲ್ಲಿ ಖರೀದಿಗೆ ಲಭ್ಯವಿದೆ.
ಈ ಕಾರು ಅನಿಯಮಿತ ಕಿಲೋಮೀಟರ್ಗಳ ಸ್ಟ್ಯಾಂಡರ್ಡ್ ಎರಡು ವರ್ಷಗಳ ವಾರಂಟಿಯನ್ನು ಹೊಂದಿರುತ್ತದೆ. ರಿಪೇರಿ ಇನ್ಕ್ಲೂಸಿವ್ (Repair Inclusive) ಯಾವುದೇ ಮೈಲೇಜ್ ಮಿತಿಯಿಲ್ಲದೆ ಖರೀದಿಯ ಮೂರನೇ ವರ್ಷದಿಂದ ಗರಿಷ್ಠ ಐದನೇ ವರ್ಷದವರೆಗೆ ವಾರಂಟಿ ಪ್ರಯೋಜನಗಳನ್ನು ವಿಸ್ತರಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.
ಬಿಎಂಡಬ್ಲ್ಯು ಐ5 ಎಂ60 ಎಕ್ಸ್ ಡ್ರೈವ್ ನಲ್ಲಿರುವ ಹೈ ವೋಲ್ಟೇಜ್ ಬ್ಯಾಟರಿಯು ಎಂಟು ವರ್ಷ ಅಥವಾ 1,60,000 ಕಿಲೋಮೀಟರ್ವರೆಗೆ ಮಾನ್ಯವಾಗಿರುವ ವಾರಂಟಿಯನ್ನು ಹೊಂದಿರುತ್ತದೆ.